Kannada NewsLatest

ಲೋಕಸಭೆಗಿಂತ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವುದೇ ಕಷ್ಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತನೆಯೇ ದೇವರ ಸೇವೆಗಿಂತ ಶ್ರೇಷ್ಠವಾದ ಸೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.

ಅವರು ಇಂದು ನಗರದ ಜಿ.ಕೆ.ವಿಕೆ ಆವರಣದಲ್ಲಿರುವ ಡಾ|| ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ನಡೆದ ರಾಜ್ಯದ ಉತ್ತಮ ಸಾಧನೆಗೈದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಚಿಂತನ – ಮಂಥನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಂ.ಪಿ. ಎಲೆಕ್ಷನ್ ಗೆಲ್ಲಬಹುದು, ಎಂ.ಎಲ್.ಎ. ಎಲೆಕ್ಷನ್ ಗೆಲ್ಲಬಹುದು, ಆದರೆ ಗ್ರಾಮಪಂಚಾಯಿತಿ ಎಲೆಕ್ಷನ್ ಗೆಲ್ಲುವುದು ವಿಶೇಷ ಹಾಗೂ ವಿಶಿಷ್ಠ. ಉತ್ತಮ ಕೆಲಸ ಮಾಡುವವರು ಮಾತ್ರ ಗೆಲ್ಲಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರದ ಎರಡನೇ ಶಕ್ತಿಯೇ ಗ್ರಾಮಪಂಚಾಯಿತಿ ಎಂದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮ ಸಾಧನೆ ಗೈದ ೫೨೮ ಅಧ್ಯಕ್ಷರುಗಳು, ೧೫೮೪ ಜನ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿ ನಾನು ಕೆಲವು ಗ್ರಾಮಪಂಚಾಯಿತಿಗಳಿಂದ ವರದಿ ತರಿಸಿಕೊಂಡಿದ್ದೇನೆ, ಭೇಟಿ ನೀಡಿದ್ದೇನೆ.

ನಿಜವಾಗಿಯೂ ಒಳ್ಳೆಯ ಕೆಲಸ ಮಾಡಿದ್ದಾರೆ. ಗ್ರಾಮಗಳಲ್ಲಿನ ಘನತ್ಯಾಜ್ಯ ವಿಲೇವಾರಿ ಮಾಡುವಲ್ಲಿ, ಶಾಲಾ ಕಾಲೇಜುಗಳಲ್ಲಿ ಸ್ವಚ್ಛಭಾರತ್ ಅಭಿಯಾನ ಕುರಿತ ಕಾರ್ಯಕ್ರಮಗಳು, ತೆರಿಗೆ ಸಂಗ್ರಹಣೆ ಹೀಗೆ ಉತ್ತಮ ಕೆಲಸ ಮಾಡಿರುವವರನ್ನು ಗುರುತಿಸುವ ಈ ಕಾರ್ಯಕ್ರಮ ಇತರರಿಗೆ ಮಾದರಿಯಾಗಬೇಕು ಎಂದರು.
ಮುಂಬರುವ ಗ್ರಾಮಪಂಚಾಯಿತಿ ಚುನಾವಣೆ ವೇಳೆಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಧಿಕಾರಿಗಳು ಇನ್ನೂ ಹೆಚ್ಚು ಶ್ರಮಿಸಬೇಕು. ಪ್ರತಿಯೊಂದು ಗ್ರಾಮವು ಬಯಲು ಬಹಿರ್ದೆಸೆ ಮುಕ್ತವಾಗಿ ಯಾವೊಬ್ಬ ಹೆಣ್ಣುಮಗಳು ಬಯಲು ಶೌಚಾಲಯಕ್ಕೆ ಹೋಗದಂತೆ ಶೌಚಾಲಯಗಳ ನಿರ್ಮಾಣವಾಗಬೇಕು.

ಹಳ್ಳಿ ಜನರ ಆರೋಗ್ಯ, ಶಿಕ್ಷಣ, ಸ್ವಚ್ಛತೆ, ಹೀಗೆ ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿ ಪಟ್ಟಣಗಳ ಜನರು ಹಳ್ಳಿಯ ಕಡೆ ಮುಖ ಮಾಡುವಂತಾಗಬೇಕು. ಭಾರತ ರೈತರ ದೇಶ ಗಾಂಧೀಜಿಯವರ ಗ್ರಾಮಗಳ ಅಭಿವೃದ್ಧಿಯ ಕನಸು ನನಸಾಗಬೇಕಾದರೆ ಗ್ರಾಮಗಳಲ್ಲಿ ಉತ್ತಮ ಕೆಲಸವಾಗಬೇಕು.

ಅಲ್ಲಿನ ಅಧ್ಯಕ್ಷರು, ಇತರ ಅಧಿಕಾರಿಗಳು ದುಶ್ಚಟಗಳಿಂದ ದೂರ ಇದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು. ಉತ್ತಮ ಯೋಜನೆಗಳನ್ನು ರೂಪಿಸಿ, ಅಂದಾಜು ಪಟ್ಟಿ ಕಳಿಸಿದಲ್ಲಿ ಪರಿಶೀಲಿಸಿ ಅನುದಾನ ನೀಡಲು ಸರ್ಕಾರ ಬದ್ಧವಾಗಿದೆ.

ಪ್ರತಿ ಗ್ರಾಮಪಂಚಾಯಿತಿಗೆ ಒಂದರಂತೆ ಬಯಲು ಜಿಮ್ ನಿರ್ಮಾಣ ಮಾಡಲು ಸರ್ಕಾರ ಆಲೋಚಿಸಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಸೂಕ್ತ ಜಾಗ ಗುರುತಿಸಿದಲ್ಲಿ ಸರ್ಕಾರದಿಂದ ಎಲ್ಲಾ ನೆರವು ನೀಡಲಾಗುವುದು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎನ್. ನಾಗಾಂಬಿಕಾದೇವಿ ಅವರು ಮಾತನಾಡಿ ಆಡಳಿತದ ಅಡಿಪಾಯ ಎಂದರೆ ಗ್ರಾಮ ಪಂಚಾಯಿತಿ. ಯಾವುದೇ ಯೋಜನೆ ಜನರಿಗೆ ತಲುಪುವುದು ಗ್ರಾಮಪಂಚಾಯಿತಿಗಳ ಮೂಲಕ.

ರಾಷ್ಟ್ರ, ರಾಜ್ಯ ನಿರ್ಮಾಣದಲ್ಲಿ ಜನತೆಯನ್ನು ವಿಶ್ವದಲ್ಲಿ ವಿಶ್ವಮಾನ್ಯ ಮಾಡುವ ಜವಾಬ್ದಾರಿ ಗ್ರಾಮಪಂಚಾಯಿತಿಗಳದ್ದಾಗಿದೆ. ವಿಕೇದ್ರೀಕರಣ ನಮ್ಮ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿದೆ. ಒಂದು ತಾಲೂಕಿನಲ್ಲಿ ಮೂರು ಗ್ರಾಮಪಂಚಾಯಿತಿಗಳ ಅಳತೆಗೋಲಿನಿಂದ ಕೆಲಸ ಮಾಡುತ್ತಿರುವುದು ವಿಶೇಷ.

ಇದಕ್ಕಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪುರಸ್ಕಾರ ಸಿಕ್ಕಿದೆ. ಪ್ರತಿಯೊಂದು ಗ್ರಾಮಪಂಚಾಯಿತಿಗಳು ಅದೇ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇಂದಿನ ಸಂವಾದ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ಯೋಜನೆಗಳನ್ನು ರೂಪಿಸಲು ಸಂಪನ್ಮೂಲ ಕ್ರೂಢೀಕರಿಸಲು ಉಪಯುಕ್ತವಾಗಿದ್ದು ಎಲ್ಲರೂ ಶ್ರದ್ಧೆಯಿಂದ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು.

ಎಲ್ಲಿ ಆರೋಗ್ಯ ಇರುತ್ತದೋ ಅಲ್ಲಿ ಅಭಿವೃದ್ಧಿ ಇರುತ್ತದೆ. ಅದಕ್ಕಾಗಿ ಸಚಿವರು ಜಿಮ್ ಪ್ರಾರಂಭ ಮಾಡುವಂತೆ ತಿಳಿಸಿದ್ದಾರೆ. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಬೇಕು. ನಗರದ ಜನ ಹಳ್ಳಿಗಳನ್ನು ಹುಡುಕಿಕೊಂಡು ಬರುವಂತಾಗಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪಂಚಾಯತ್ ರಾಜ್ ಪ್ರಾಧಾನ ಕಾರ್ಯದರ್ಶಿಗಳಾದ  ಉಮಾಮಹದೇವನ್ ಅವರು ನಾಲ್ಕು ಗೋಷ್ಠಿಗಳ ಮೂಲಕ ಇಡೀ ದಿನ ನಡೆಯುವ ಸಂವಾದ ಕಾರ್ಯಕ್ರಮವನ್ನು ವಿವಿರಿಸುತ್ತಾ, ದೇಶದಲ್ಲಿ ನಮ್ಮ ರಾಜ್ಯದ ಗ್ರಾಮಪಂಚಾಯಿತಿಗಳು ಉತ್ತಮ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ. ಕೇಂದ್ರ ಹಾಗೂ ರಾಜ್ಯಗಳು ರೂಪಿಸುವ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿದೆ. ಎಲ್ಲರೂ ಶಿಸ್ತಿನಿಂದ ಭಾಗವಹಿಸಿ ಇಡೀ ದಿನ ಸಚಿವರ ಸಮುಖದಲ್ಲಿ ನಡೆಯುವ ಸಂವಾದ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪಂಚಾಯತ್ ರಾಜ್ – ನಿರ್ದೇಶಕರಾದ ಆಸ್ರಫುಲ್ ಹಸನ್ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇತರ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button