ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯ – ಪ್ರೊ.ತ್ಯಾಗರಾಜ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿದ್ಯಾರ್ಥಿಗಳ ಪಾಲನೆ, ಪೋಷಣೆ ಮತ್ತು ಬೆಳವಣಿಗೆಯಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಾಗಿರುತ್ತದೆ. ಹಾಗಾಗಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ನಡುವಳಿಕೆಯನ್ನು ನೀಡುವುದು ಆದ್ಯ ಕರ್ತವ್ಯವಾಗಿದೆ ಎಂದು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.
ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿರುವ ದೇವೇಂದ್ರ ಜಿನಗೌಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಕಲಿಕಾ ಭಾವನೆ ಕಡಿಮೆಯಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ದುಡ್ಡು ಕೊಟ್ಟು ಶಾಲೆಗೆ ಸೇರಿಸಿ ಎಲ್ಲ ಜವಾಬಾರಿಯನ್ನು ಶಿಕ್ಷಕರಿಗೆ ಒಪ್ಪಿಸಿದರೆ ಸಾಲದು. ಶಿಕ್ಷಕರ ಜೊತೆ ಮನೆಯಲ್ಲಿ ತಮ್ಮ ಮಕ್ಕಳ ಜವಾಬ್ದಾರಿಯನ್ನು ಪಾಲಕರು ಸರಿಯಾಗಿ ನಿರ್ವಹಿಸಬೇಕು. ಅವರಿಗೆ ಉತ್ತಮ ಸಂಸ್ಕಾರ ನೀಡಬೇಕೆಂದು ಅವರು ತಿಳಿಸಿದರು.
ಮಕ್ಕಳ ಜೊತೆ ಉತ್ತಮ ಒಡನಾಟವನ್ನು ಪಾಲಕರು ಹೊಂದಿರಬೇಕು. ಇದರಿಂದಾಗಿ ಸಂಬಂಧಗಳು ಗಟ್ಟಿಯಾಗುತ್ತವೆ. ಈ ಸಂಬಂಧವೇ ಜೀವನದ ಮುಖ್ಯ ಆಧಾರ ಸ್ಥಂಭವಾಗುತ್ತದೆ. ಇಂದಿನ ಶಿಕ್ಷಣ ಪದ್ದತಿ ಅತೀ ವೇಗದಲ್ಲಿ ಬದಲಾಗುತ್ತಿದೆ. ಈ ಶಿಕ್ಷಣಕ್ಕೆ ತಕ್ಕಂತೆ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಹೇಳಿದ ಅವರು, ಇಂದು ಜಿನಗೌಡ ಶಾಲೆಯು ೨೫ ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಗೋಪಾಲ ಜನಗೌಡ ಅವರು. ಅವರ ಕಠಿಣ ಪರಿಶ್ರಮ ಮತ್ತು ಅವರ ಸಾಮಾಜಿಕ ಕಾರ್ಯವನ್ನು ಗಮನಿಸಿ ಅವರಿಗೆ ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಸಮಾರಂಭದ ಇನ್ನೋರ್ವ ಅತಿಥಿ ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಸಿದ್ದು ಅಲಗೂರ ಅವರು ಮಾತನಾಡಿ, ಗೋಪಾಲ ಜಿನಗೌಡ ಅವರು ಗ್ರಾಮೀಣ ಪ್ರದೇಶಧಲ್ಲಿ ಇಂತಹ ಅತ್ಯುತ್ತಮ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಗ್ರಾಮೀಣ ಜನರ ಮತ್ತು ರೈತರ ಮಕ್ಕಳಿಗೆ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಇಂದಿನ ಡೊನೇಷನ್ ಹಾವಳಿಯ ನಡುವೆ ಯಾವುದೇ ಡೊನೆಷನ್ ಪಡೆಯದೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮೂಲಕ ಶಿಕ್ಷಣ ಮಾರಾಟದ ವಸ್ತುವಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಅವರು ಹೇಳಿದರು.
ಗೋಪಾಲ ಜಿನಗೌಡ ಅವರು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ಈ ಕಾರ್ಯದಿಂದಲೇ ಇಂದು ಈ ಸಂಸ್ಥೆಯ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ. ಗೋಪಾಲ ಜಿನಗೌಡ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋಪಾಲ ಜಿನಗೌಡ ಎಜ್ಯುಕೇಶನ ಟ್ರಸ್ಟ ಅಧ್ಯಕ್ಷ ಗೋಪಾಲ ಜಿನಗೌಡ ಅವರು, ನನ್ನ ಜೀವನದಲ್ಲಿ ವ್ಯವಹಾರಗಳನ್ನು ಮಾಡುವಾಗ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿರುವೆ. ಇದರಿಂದಾಗಿ ಇಂದು ದೊಡ್ಡದಾದ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಯಿತು. ಜೀವನದಲ್ಲಿ ಪ್ರಾಮಾಣಿಕತೆ ಇದ್ದರೆ ಎಲ್ಲವನ್ನು ಸಹ ಸಾಧಿಸಬಹುದಾಗಿದೆ ಎಂದು ಅವರು ತಿಳಿಸಿದರು.
ವೇದಿಕೆ ಮೇಲೆ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರಾದ, ಹುಕುಮಚಂದ ರತ್ತು,. ಇಂದಿರಾ ಶಂಕರಗೌಡಾ, ಭುಜಬಲಿ ಶಂಕರಗೌಡಾ, ಸಂದೀಪ ಚಿಪ್ರೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ದೇವೇಂದ್ರ ಜಿನಗೌಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯೆ ವಿಜಯಲಕ್ಷ್ಮೀ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯವಂತ ಮಾರಿಹಾಳ ಮತ್ತು ಡಯಾನಾ ಡಿಸೋಜಾ ಅತಿಥಿಗಳನ್ನು ಪರಿಚಯಿಸಿದರು. ವಿಜಯಲಕ್ಷ್ಮೀ ಹಲಗತ್ತಿ , ಅಲ್ಕಾ ಜಿಂಗಾಡೆ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಜಿನಗೌಡಾ ಮಹಾವಿದ್ಯಾಲಯದ ಪ್ರಾಚಾರ್ಯೆ ಭಾರತಿ ರಂಗಣೇಕರ ವಂದಿಸಿದರು. ಇದೆ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ