ಪ್ರಗತಿವಾಹಿನಿ ಸುದ್ದಿ, ಮುಂಬೈ: ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಉತ್ತಮ ಹವ್ಯಾಸಗಳನ್ನು ರೂಢಿಸಲು ಶಿಕ್ಷಕರು ಸ್ವಲ್ಪ ಕಠೋರವಾಗಿ ವರ್ತಿಸುವುದು ಅಪರಾಧವಲ್ಲ” ಎಂದು ಬಾಂಬೆ ಹೈಕೋರ್ಟ್ ಗೋವಾ ಬೆಂಚ್ ಹೇಳಿದೆ.
ಶಾಲೆಯಲ್ಲಿ ಶಿಸ್ತು ಕಾಯ್ದುಕೊಳ್ಳುವ ಸಲುವಾಗಿ ಶಿಕ್ಷಕರೊಬ್ಬರು ಮಗುವಿಗೆ ಗದರಿಸಿದರೆ ಅಥವಾ ಸಮಂಜಸವಾದ ಶಿಕ್ಷೆಯನ್ನು ವಿಧಿಸಿದರೆ ಆ ಕೃತ್ಯ ಅಪರಾಧ ಎಂದೆನಿಸಿಕೊಳ್ಳುವುದಿಲ್ಲ ಹೈಕೋರ್ಟ್ ಹೇಳಿದೆ.
ಏಕ ಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಭರತ್ ದೇಶಪಾಂಡೆ ಈ ತೀರ್ಪು ನೀಡಿದ್ದಾರೆ. “ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ತೀರಾ ಸಾಮಾನ್ಯ. ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಶಿಕ್ಷಕರು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಮತ್ತು ಕೆಲವೊಮ್ಮೆ ಸ್ವಲ್ಪ ಕಠೋರವಾಗಿ ವರ್ತಿಸಬೇಕು” ಎಂದು ನ್ಯಾಯಪೀಠ ಹೇಳಿದೆ.
ಜೊತೆಗೆ, ಪ್ರಾಧಮಿಕ ಶಾಲಾ ಶಿಕ್ಷಕನಿಗೆ ವಿಧಿಸಲಾಗಿದ್ದ ಒಂದು ದಿನದ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡವನ್ನು ರದ್ದುಗೊಳಿಸಿದೆ. ವಿದ್ಯಾರ್ಥಿಗಳಿಬ್ಬರಿಗೆ ಬೆತ್ತದಲ್ಲಿ ಹೊಡೆದ ಆರೋಪವನ್ನು ಶಿಕ್ಷಕ ಎದುರಿಸಿದ್ದರು.
ಐದು ಮತ್ತು ಎಂಟು ವರ್ಷದ ಇಬ್ಬರು ಬಾಲಕಿಯರಿಗೆ ಶಿಕ್ಷಕರೊಬ್ಬರು ಹೊಡೆದ ಆರೋಪದ ಕೇಸ್ ದಾಖಲಾಗಿತ್ತು. ಚಿಕ್ಕ ಹುಡುಗಿ ತನ್ನ ಬಾಟಲಿಯಲ್ಲಿದ್ದ ನೀರು ಕುಡಿದು ಮುಗಿಸಿದ ಬಳಿಕ ಬೇರೊಬ್ಬ ಬಾಲಕಿಯ ಬಾಟಲಿಯಿಂದ ನೀರು ಕುಡಿದಿದ್ದಳು. ಇದನ್ನು ವಿಚಾರಿಸಲು ಬಂದ ಬಾಲಕಿಯ ಅಕ್ಕನಿಗೂ ಶಿಕ್ಷಕರು ಹೊಡೆದರು. ಇಬ್ಬರಿಗೂ ಕೈಗೆ ರೂಲರ್ ಹಿಡಿದು ಹೊಡೆದರು ಎಂಬುದು ಆರೋಪ.
ಬೇರೊಬ್ಬ ಬಾಲಕಿಯ ಬಾಟಲಿಯಿಂದ ನೀರು ಕುಡಿಯುವುದು ಖಚಿತವಾಗಿಯೂ ಶಾಲಾ ಶಿಸ್ತಿನ ಉಲ್ಲಂಘನೆ. ಶಿಸ್ತನ್ನು ಪಾಲಿಸಬೇಕಾದ ಹೊಣೆಗಾರಿಕೆ ಇರುವ ಕಾರಣ ಶಿಕ್ಷಕರು ದಂಡಿಸಿದ್ದಾರೆ ಎಂಬುದನ್ನು ನ್ಯಾಯಪೀಠ ಗಮನಿಸಿತು. ಅಂತಹ ಸಂದರ್ಭಗಳಲ್ಲಿ, ಆರೋಪಿಯು ಶಿಕ್ಷಕನಾಗಿರುವುದರಿಂದ ಶಾಲಾ ಶಿಸ್ತು ಪಾಲನೆಗೆ ಅನುಗುಣವಾಗಿ ನಡೆದುಕೊಳ್ಳಲು ಬದ್ಧನಾಗಿರುತ್ತಾನೆ. ತನ್ನ ಸ್ವಂತ ತರಗತಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು, ಕೆಲವೊಮ್ಮೆ, ವಿದ್ಯಾರ್ಥಿಗಳು ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಮತ್ತು ಪದೇ ಪದೇ ಅಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ಸಮಂಜಸವಾದ ಶಿಕ್ಷೆಯನ್ನೂ ಕೊಡಬೇಕಾಗುತ್ತದೆ”ಎಂದು ನ್ಯಾಯಾಲಯವು ತೀರ್ಪು ನೀಡಿದೆ.
“ಸಮಾಜದಲ್ಲಿ ಶಿಕ್ಷಕರಿಗೆ ಹೆಚ್ಚಿನ ಗೌರವವಿದೆ. ಅವರು ನಮ್ಮ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬು. ಕ್ಷುಲ್ಲಕ ವಿಷಯಗಳಿಗೆ ಮತ್ತು ಹೆಚ್ಚು ನಿರ್ದಿಷ್ಟವಾಗಿ ಮಕ್ಕಳನ್ನು ಸರಿಪಡಿಸುವಾಗ ಶಿಕ್ಷಕರು ಇಂತಹ ಆರೋಪಗಳ ಭಯದಲ್ಲಿದ್ದರೆ, ಶಾಲೆಗಳನ್ನು ನಡೆಸುವುದು ಕಷ್ಟವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
“ವಿದ್ಯಾರ್ಥಿಗಳು ಕೇವಲ ಬೋಧನೆಯ ಉದ್ದೇಶಕ್ಕಾಗಿ ಮಾತ್ರವಲ್ಲದೆ ಶಿಸ್ತನ್ನು ಒಳಗೊಂಡಿರುವ ಜೀವನದ ಇತರ ಅಂಶಗಳನ್ನು ಕಲಿಯಲು ಬೇಕು ಎಂಬ ಉದ್ದೇಶದೊಂದಿಗೆ ಶಾಲೆಗೆ ಸೇರಿಸಲಾಗುತ್ತದೆ. ಶಾಲೆಯ ಉದ್ದೇಶವು ಶೈಕ್ಷಣಿಕ ವಿಷಯಗಳನ್ನು ಕಲಿಸುವುದು ಮಾತ್ರವಲ್ಲ, ಅಂತಹ ವಿದ್ಯಾರ್ಥಿಗಳನ್ನು ಜೀವನದ ಎಲ್ಲ ಆಯಾಮಗಳನ್ನು ಎದುರಿಸುವುದಕ್ಕೆ ಬೇಕಾದಂತೆ ಸಿದ್ಧಪಡಿಸುವುದು ಕೂಡ ಆಗಿದೆ. ಇದರಿಂದ ಭವಿಷ್ಯದಲ್ಲಿ ಅವರು ಉತ್ತಮ ನಡವಳಿಕೆ ಮತ್ತು ಸ್ವಭಾವದ ವ್ಯಕ್ತಿಯಾಗುತ್ತಾರೆ ”ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು.
2019 ರಲ್ಲಿ ಗೋವಾ ಮಕ್ಕಳ ನ್ಯಾಯಾಲಯವು ನೀಡಿದ ಆದೇಶದ ಮೂಲಕ ಶಿಕ್ಷಕನನ್ನು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ