Kannada NewsKarnataka News

ಮನೆಯ ವ್ಯಕ್ತಿಯೊಬ್ಬ ಸತ್ತಷ್ಟೇ ದುಃಖವಾಗಿದೆ

ಪ್ರಗತಿವಾಹಿನಿ ಸುದ್ದಿ, ಅಥಣಿ- ಕಾಂಗ್ರೇಸ್ ಪಕ್ಷಕ್ಕೆ ಕೈ ಕೊಟ್ಟು ಆಪರೇಶ್ ಕಮಲಕ್ಕೆ ಒಳಗಾಗಿದ್ದ ನಮ್ಮ ಕ್ಷೇತ್ರದ ಅನರ್ಹ ಶಾಸಕ ಪಕ್ಷಕ್ಕೆ ಹಾನಿ ಮಾಡಿರುವುದರಿಂದ ಮನೆಯಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಎಷ್ಟು ದುಖಃ ಆಗುತ್ತದೆಯೋ ಅಷ್ಟು ದುಖಃ ನಮ್ಮೆಲ್ಲ ತಾಲೂಕಿನ ಕಾರ್ಯಕರ್ತರಿಗೆ ಆಗಿದೆ ಎಂದು ಮಾಜಿ ಶಾಸಕ ಮತ್ತು ಶಹಾಜಾನ ಡೊಂಗರಗಾಂವ್ ಅವರು ಹೇಳಿದರು.
ಅವರು ಸೋಮವಾರ ಸಂಜೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಒಬ್ಬ ಸಾಮಾನ್ಯ ವ್ಯಕ್ತಿಯೂ ಕಾಂಗ್ರೇಸ್ ಶಾಸಕನಾಗಬಲ್ಲ ಎಂದು ತೋರಿಸುವುದಕ್ಕೆ ಕಳೆದ ೧೫ ವರ್ಷಗಳಿಂದ ಕಾಂಗ್ರೇಸ್ ನೆಲೆ ಇಲ್ಲದಾಗ ಒಗ್ಗಟ್ಟಿನಿಂದ ತನು ಮನ ಧನದಿಂದ ಶ್ರಮಿಸಿ ಆರಿಸಿದ್ದಕ್ಕೆ ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ, ಈ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಪರಿಸ್ಥಿತಿ ಡೋಲಾಯಮಾನ

ಆಪರೇಶ್ ಕಮಲಕ್ಕೆ ತುತ್ತಾದವರ ಪರಿಸ್ಥಿತಿ ಡೋಲಾಯಮಾನವಾಗಿದೆ. ಆಪರೇಷನ್ ದವರು ನಾವು ಡಿ.ಕೆ.ಶಿ ಮತ್ತು ಸಿದ್ದರಾಮಯ್ಯನವರ ಮಾತು ಮೀರಿ ಬಂದು ಹಾಳಾಗಿದ್ದೇವೆ. ನಿಮ್ಮ ಮುಂದೆ ಬೊಬ್ಬೆ ಇಡಬೇಕಾಗಿದೆ ಅಂತ ಮೊನ್ನೆ ಶನಿವಾರ ದಿನ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನ್ನವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಅಂದಮೇಲೆ ಅವರ ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂದು ಖಾರವಾಗಿ ನುಡಿದರು.
ಈ ಹಿಂದೆ ಬಿಜೆಪಿ ಸರಕಾರಕ್ಕೆ ಜನರು ಜನಾದೇಶ ನೀಡಿರಲಿಲ್ಲ. ಈಗಲೂ ನೀಡಿಲ್ಲ. ಹಿಂದೆ ಆಪರೇಶನ್ ಕಮಲ ಮಾಡಿ ಅಧಿಕಾರ ನಡೆಸಿದರು. ಈಗಲೂ ಅದೆ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಹಿಂದೆ ಏನೆಲ್ಲ ಮಾಡಿ ಎಷ್ಟು ಜನ ಜೈಲಿಗೆ ಹೋಗಿ ಬಂದಿದ್ದಾರೆ.

ಅವರಿಂದ ಹೇಗೆ ಸ್ವಚ್ಚ ಆಡಳಿತ ಸಾಧ್ಯವೆಂದು ಲೇವಡಿ ಮಾಡಿದರು. ಅದಲ್ಲದೆ ನೆರೆ ಹಾವಳಿ ಸಂತ್ರಸರಿಗೆ ಸ್ಫಂದಿಸಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಸ್ಥಳೀಯರಿಗೆ ಟಕೇಟ್ ನೀಡಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿಯನ್ನು ಆರಿಸಿತರುತ್ತೇವೆ ಎಂದು ಹೇಳಿದರು.

ಅಸಮರ್ಥ ವ್ಯಕ್ತಿಯಾಗಿದ್ದ

ಅನಂತರದಲ್ಲಿ ಜಿ.ಪಂ.ಸದಸ್ಯ ಬಸವರಾಜ ಬುಟಾಳೆ ಮಾತನಾಡಿ, ಅನರ್ಹನಾಗಿದ್ದ ಶಾಸಕ ಮಹೇಶ ಕುಮಠಳ್ಳಿ ಯಾರಲ್ಲಿ ಚಾಕರಿ ಇಟ್ಟಕೊಳ್ಳಲಾರದಷ್ಟು ಅಸಮರ್ಥ ವ್ಯಕ್ತಿಯಾಗಿದ್ದ. ಅಂತಹ ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸಿಕೊಟ್ಟದ್ದು ನಮ್ಮ ಕಾಂಗ್ರೇಸ್ ಕಾರ್ಯಕರ್ತರು.

ಅವರನ್ನು ಮರೆತಿದ್ದು ಅಸಹನೀಯ ಎಂದು ಲೇವಡಿ ಮಾಡಿದರು. ಹಾಗೂ ಮುಂಬರುವ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಗಳಾಗಲಿ ಎಲ್ಲರೂ ಕೂಡಿ ಚುನಾವಣೆ ಎದುರಿಸೋಣ. ಅದನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಯಾರೂ ತೊಡಗಬೇಡಿ ಎಂದರು.

ಇನ್ನೋರ್ವ ಹಿರಿಯ ಕಾಂಗ್ರೆಸ್ ಧುರೀಣ ಎಸ್.ಕೆ.ಬುಟಾಳೆ ಮಾತನಾಡಿ, ಹೊರಗಿನ ಅಭ್ಯರ್ಥಿಗಳ ಹೆಸರು ಕೇಳಿಬರುತ್ತಿರುವುದು. ಇದಕ್ಕೆ ಸ್ಥಳೀಯ ಕಾರ್ಯಕರ್ತರ ಒಪ್ಪಿಗೆ ಇಲ್ಲ, ಇದು ಸರಿಯಲ್ಲ. ನಮ್ಮಲ್ಲಿ ಸಮರ್ಥವಾಗಿ ಚುನಾವಣೆ ಎದುರಿಸುವ ಶಕ್ತಿ ಇದೆ.

ಅದಕ್ಕಾಗಿ ಸ್ಥಳೀಯರಿಗೆ ಮಾತ್ರ ಟಕೇಟ್ ನೀಡಬೇಕು. ಹೊರಗಿನವರಿಗೆ ನೀಡಿದರೆ ನಾವು ಯಾವುದೇ ಮುಲಾಜ್ ಇಲ್ಲದೆ ಒಪ್ಪುವದಿಲ್ಲ ಎಂದು ಹೇಳಿದರು.

ಬೆಳಗಾವಿಯಲ್ಲಿ ಪ್ರತಿಭಟನೆ

ನಂತರ ಗಜಾನನ ಮಂಗಸೂಳಿ ಮಾತನಾಡಿ, ನಮ್ಮ ಪ್ರಧಾನಿಗಳಿಗೆ ಕರ್ನಾಟಕದ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ನಮ್ಮ ನೆರೆ ಸಂಕಷ್ಟಕ್ಕೆ ಬರಲಿಲ್ಲ. ಬೆಂಗಳೂರಿಗೆ ಬಂದರೂ ಇದರ ಬಗ್ಗೆ ಮಾತನಾಡಲಿಲ್ಲ. ಇದುವರೆಗೂ ಇದರ ಕುರಿತು ಒಂದು ಶಬ್ದ ಸಹ ಮಾತನಾಡಿಲ್ಲ ಎಂದು ಹೇಳಿದರು.

ಅದಲ್ಲದೆ ಕೇಂದ್ರ ರಾಜ್ಯ ಸರಕಾರದ ನೆರೆ ಸಂತ್ರಸ್ತರಿಗೆ ಸ್ಪಂದಿಸಲು ವಿಫಲವಾಗಿದ್ದಕ್ಕೆ ಖಂಡಿಸಿ ನಾಳೆ ಬೆಳಗಾವಿಯಲ್ಲಿ ಪ್ರತಿಭಟನೆ ಇದೆ. ತಾವೆಲ್ಲ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕರೆ ನೀಡಿದರು.
ನಂತರದಲ್ಲಿ ಶಿರಹಟ್ಟಿ ಎ.ಬಿ..ಪಾಟೀಲ ಮಾತನಾಡಿ, ನಾವು ಜಿಲ್ಲಾ ಮತ್ತು ರಾಜ್ಯ ಮುಖಂಡರನ್ನು ನಂಬಿ ಮೋಸ ಹೋಗಿದ್ದೇವೆ. ಸ್ಥಳಿಯರಾದ ನಾವು ಒಗ್ಗಟಾಗಿ ಸಾಕಷ್ಟು ಸಮರ್ಥ ವ್ಯಕ್ತಿಗಳು ಇದ್ದೇವೆ. ನಮಗೆ ಟಕೇಟ. ನೀಡಿ ಎಂದು ಸಂದೇಶವನ್ನು ಕಳಿಸೋಣ ಎಂದು ಹೇಳಿದರು.

ಈ ಸಭೆಯ ನೇತೃತ್ವವನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಅನೀಲ ಸುಣದೋಳಿವಹಿಸಿದ್ದರು.
ಈ ಸಭೆಯಲ್ಲಿ ಸುರೇಶ ಪಾಟೀಲ್, ಶ್ರೀಕಾಂತ ಅಸ್ಕಿ ಮುಂತಾದವರು ಮಾತನಾಡಿದರು. ಸ್ವಾಗತ ಅನೀಲ ಸುಣದೋಳಿ, ಕಾರ್ಯಕ್ರಮ ನಿರೂಪಣೆ ಸಂಜು ಕಾಂಬಳೆ ಮಾಡಿದರು.
ಈ ವೇಳೆ ಧರೆಪ್ಪ ಠಕ್ಕನ್ನವರ, ರಾವಸಾಬ ಐಹೋಳೆ, ಶಿವು ಗುಡ್ಡಾಪೂರ, ವಿನಾಯಕ ದೇಸಾಯಿ. ರೇಖಾ ಪಾಟೀಲ, ಶ್ರೀಶೈಲ ಸಂಕ, ಮಂಜುನಾಥ ಹೋಳಿಕಟ್ಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಚುನಾವಣೆ ನೀತಿ ಸಂಹಿತೆ ಇದ್ದರೂ ಸಹ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರಿಗೆ ಉಪಹಾರ ಮಾಡಿಸಲಾಗಿತ್ತು. ಅದನ್ನು ಕಾರ್ಯಕರ್ತರು ತಿನ್ನುತ್ತಿರುವಾಗ ಚುನಾವಣೆಯ ನಿತಿ ಸಂಹಿತೆ ಇದೆ,  ಚುನಾವಣಾಧಿಕಾರಿಗಳಿಗೆ ತಿಳಿದಿದ್ದು, ಅವರು ಬರುತ್ತಿದ್ದಾರೆ ಎನ್ನುವ ಮಾಹಿತಿ ಬಂತು.

ತಕ್ಷಣ ಕಾಂಗ್ರೇಸ್ ಮುಖಂಡರು ಉಪಹಾರವನ್ನು ಬಂದ್ ಮಾಡಿದರು. ತಿನ್ನುತ್ತಿದ್ದವರು ಬೀಸಾಕಿದರು. ನಂತರ ಚುನಾವಣಾ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button