ಇದು ಹಿಂದೂ ರಾಷ್ಟ್ರ ಸ್ಥಾಪನೆಯ ನಾಂದಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಜಮ್ಮು-ಕಾಶ್ಮೀರದಲ್ಲಿಯ ಕಲಂ 370 ರದ್ದು ಪಡಿಸಿರುವುದು ಇದು ಹಿಂದೂ ರಾಷ್ಟ್ರ ಸ್ಥಾಪನೆಯ ನಾಂದಿ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಭಾಜಪ ಸರಕಾರವು ಜಮ್ಮು-ಕಾಶ್ಮೀರದಲ್ಲಿಯ ‘ಕಲಂ 370’ ಹಾಗೂ ‘35-ಎ’ ತೆಗೆದುಹಾಕಿ ಒಂದು ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದೆ. ಕಾಂಗ್ರೆಸ್ 70 ವರ್ಷಗಳ ಹಿಂದೆ ಮಾಡಿದಂತಹ ಪಾಪವನ್ನು ಮೋದಿ ಸರಕಾರವು ತೊಳೆದುಹಾಕಿದೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ, ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳ ವತಿಯಿಂದ ಕೇಂದ್ರ ಸರಕಾರವನ್ನು ಅಭಿನಂದಿಸುತ್ತದೆ. ಕಲಂ 370ನ್ನು ತೆಗೆದುಹಾಕಿ ಭಾರತಮಾತೆಯ ತಲೆಯ ಮೇಲಿನ ಭಾರವನ್ನು ಹಗುರ ಮಾಡಿದೆ, ಇನ್ನು ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರ ಕಣಿವೆಯಲ್ಲಿ ಪುನರ್‌ವಸತಿಯನ್ನು ಕಲ್ಪಿಸಿ ಸುವರ್ಣದ ಮುಕುಟವನ್ನು ಏರಿಸಬೇಕು. ಇದು ಹಿಂದೂ ರಾಷ್ಟ್ರದ ಸ್ಥಾಪನೆಯ ನಾಂದಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕಲಂ 370ನ್ನು ತೆಗೆದುಹಾಕಬೇಕು ಎಂಬ ಬೇಡಿಕೆಯನ್ನು ದೇಶಭಕ್ತ ನಾಗರಿಕರು ಹಾಗೂ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಅನೇಕ ಹಂತಗಳಲ್ಲಿ ಮಾಡಿದ್ದರು. ಇಂದು ಈ ಬೇಡಿಕೆಗೆ ನ್ಯಾಯ ಸಿಕ್ಕಿದೆ. ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯು ಬಹಿರಂಗ ಸಭೆ ಹಾಗೂ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಗಳ ಮಾಧ್ಯಮದಿಂದ ಕಲಂ 370 ಅನ್ನು ತೆಗೆದುಹಾಕುವ ಬಗ್ಗೆ ಧ್ವನಿಯನ್ನು ಎತ್ತಿತ್ತು.
ಇನ್ನು ಸರಕಾರವು ಕಾಶ್ಮೀರದಲ್ಲಿ ಧ್ವಂಸ ಮಾಡಲಾದ ದೇವಸ್ಥಾನಗಳ ಪುನರ್‌ನಿರ್ಮಾಣ ಮಾಡಬೇಕು. ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರ ಕಣಿವೆಯಲ್ಲಿ ಪುನರ್ವಸತಿ ಕಲ್ಪಿಸಬೇಕು, ಕಳೆದ 70 ವರ್ಷಗಳಲ್ಲಿ ಜಮ್ಮೂ-ಕಾಶ್ಮೀರ ವಿಧಾನಸಭೆಯು ರೂಪಿಸಿದ ದೇಶವಿರೋಧಿ ಕಾನೂನುಗಳನ್ನು ರದ್ದು ಮಾಡಬೇಕು ಮತ್ತು ರೋಹಿಂಗ್ಯಾ ಮುಸಲ್ಮಾನರಿಗೆ ನೀಡಿದ ಆಶ್ರಯವನ್ನು ರದ್ದು ಮಾಡಿ ಅವರನ್ನು ತಕ್ಷಣವೇ ದೇಶದಿಂದ ಹೊರಗಟ್ಟಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಹಿಂದೂಗಳ ಈ ಆಗ್ರಹಕ್ಕೆ ಕೇಂದ್ರ ಸರಕಾರವು ಖಂಡಿತವಾಗಿಯೂ ಕ್ರಮಕೈಗೊಳ್ಳುವುದು ಎಂಬ ಖಾತ್ರಿ ನಮಗಿದೆ ಎಂದು ಶಿಂಧೆ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ