ಲೇಖನ- ರವಿ ಕರಣಂ.
ಇದುವರೆಗೂ ಎಲೆಗಳೆಲ್ಲ ಹಣ್ಣಾಗಿ ಉದುರಿ, ಚಿಗುರು ಮೂಡಿ, ಹಸಿರು ಛಾಚಣಿಯಂತಾದ ವೃಕ್ಷ ರಾಶಿ. ಬಗೆ ಬಗೆಯ ಬಣ್ಣಗಳ, ಆಕಾರಗಳ ಹೂ ಗಳು ಕಾಣಿಸುವ ಪರಿ ಅವರ್ಣನೀಯ! ವಸಂತನ ಕುಂಚದಿಂದ ಅಕಸ್ಮಾತ್ತಾಗಿ ಭುವಿಯ ಮೇಲೆ ಚೆಲ್ಲಿದ ಹಾಗೆ. ಗಿಡಮರಗಳೆಲ್ಲ ಸೆರಗನ್ನು ಹೊದ್ದ ಹಾಗೆ. ಮಗುವಿನ ನಗೆಯ ಅಲೆಗಳನ್ನು ತೇಲಿ ಬಿಟ್ಟ ಹಾಗೆ. ಬೆಟ್ಟ ಗುಡ್ಡಗಳು ತಿಳಿ ಹಸಿರ ಬಣ್ಣ ಹಚ್ಚಿಕೊಂಡು ತಲೆಯೆತ್ತಿ ನಿಂತ ಹಾಗೆ. ಅಲ್ಲಲ್ಲಿ ದುಂಬಿಗಳ ಝೇಂಕಾರ ದಾಂಗುಡಿ ಇಟ್ಟ ಹಾಗೆ. ಕಾಡೆಲ್ಲ ಘಮಘಮಿಸುವ ಪರಿಗೆ ಹೃದಯ ಕನವರಿಸಿದ ಹಾಗೆ. ಅಲ್ಲಲ್ಲಿ ತೊರೆಗಳು ಪರಿ ಬಿಟ್ಟ ಹಾವಂತೆ ಹರಿದ ಹಾಗೆ. ಖಗ ರಾಶಿಗೆ ಕಚಗುಳಿ ಕೊಟ್ಟು, ನಗಿಸಿ, ಉಲಿಸಿದ ಹಾಗೆ. ಮೃಗಗಳೆಲ್ಲ ಸುಡು ಬಿಸಿಲಿಗೆ ಬಳಲದಂತೆ ತಂಪು ನೆರಳಿನ ಹಾಸಿಗೆಯ ಮಾಡಿದ ಹಾಗೆ !
ನೀವು ನಿಸರ್ಗ ಪ್ರಿಯರಾಗಿದ್ದರೆ ಈ ಸಂದರ್ಭದಲ್ಲಿ ಒಮ್ಮೆ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಬೇಕು. ಬಯಲು ಸೀಮೆಯಲ್ಲಿ ದಟ್ಟ ಕಾಡಂತೂ ಇಲ್ಲ. ಆದರೂ ಸಸ್ಯವರ್ಗವಿದ್ದೇ ಇರುತ್ತದೆ. ಎಲ್ಲೆಡೆ ಕೇಳಿ – ಕಾಣಬರುವ ದೃಶ್ಯಗಳು ಮನ ಮೋಹಕ. ಕೋಗಿಲೆಗಳ ದನಿ, ಚಿಟ್ಟೆಗಳ ಹಾರಾಟ, ಬಾನಾಡಿಗಳ ಚಿತ್ತಾರ, ಗರಿ ಬಿಚ್ಚಿ ಅಂದದ ಮೈ ಮಾಟ ತೋರುವ ಮಯೂರ ಹಿಂಡು, ಕೆರೆ, ಕೊಳಗಳ ದಂಡೆಗಳಲ್ಲಿ ಕೊಕ್ಕರೆಗಳ ಮಂದ ಚಲನೆ, ಪಶು – ಮೃಗಗಳ ದಿವ್ಯ ನೋಟವಂತೂ ಅಕ್ಷರಶಃ ಸ್ವರ್ಗವನ್ನೇ ಈ ಚೈತ್ರ ಮಾಸದಲ್ಲಿ ಮೇದಿನಿಯ ಉಡಿಯಲ್ಲಿ ಹಾಕಿದಂತೆ ಕಾಣುತ್ತದೆ.
ಋತುಗಳಿಗೆ ಮುಕುಟ ಮಣಿಯೇ ವಸಂತ ಋತು. ಚೈತ್ರ ಮಾಸದ ಪ್ರಥಮ ದಿನವೇ ಹೊಸ ವರ್ಷದ ಆರಂಭದ ದಿನವೆಂದು ಪರಿಗಣಿಸಿ, ಹಿಂದೂ ಹಬ್ಬವಾಗಿದೆ. ಅದನ್ನು ಸಂದರ್ಭೋಚಿತವಾಗಿ, ಅರ್ಥಗರ್ಭಿತವಾಗಿ ಆಚರಿಸುತ್ತಾರೆ. ಹಳೆತನವ ಕಳೆದು ಹೊಸತನವ ಹೊದ್ದು ಬರುವ ಕಾಲ. ಅದೇ ಯುಗಾದಿ. ಬಹುತೇಕ ಇದು ಭಾರತದ ಉತ್ತರ ಭಾಗದ ಜನರಿಗಿಂತ ಹೆಚ್ಚಾಗಿ ದಕ್ಷಿಣ ಭಾಗದ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇನೆ. ಭಾರತದ ಹಬ್ಬಗಳಲೆಲ್ಲಾ ದೀಪಾವಳಿ – ಯುಗಾದಿ – ದಸರಾ ಹಬ್ಬಗಳು ತ್ರಿಮೂರ್ತಿಗಳಂತೆ. ಅತ್ಯಂತ ಶ್ರದ್ಧಾ ಭಕ್ತಿಯಿಂದ ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ನಂತರ ಉಳಿದಂತೆ ಎಲ್ಲ ಹಬ್ಬಗಳು ವೈಶಿಷ್ಟ್ಯತೆಯಿಂದ ಕೂಡಿದ್ದು, ಜನರ ಜೀವ ನಾಡಿಯಾಗಿವೆ.
ಜೀವನ ಕಷ್ಟ – ಸುಖಗಳ ಸಮ್ಮಿಲನ. ಹಲವು ಏರಿಳಿತಗಳು ಸರ್ವರ ಬದುಕಿನಲ್ಲಿರುವುದು ಸಾಮಾನ್ಯ ಸಂಗತಿ. ಕಷ್ಟಕ್ಕಂಜಿ ಅಳುಕದೇ, ಸುಖದಲ್ಲಿ ಮೈ ಮರೆತು ತೇಲಾಡದೇ ಎರೆಡನ್ನೂ ಸಮ ಚಿತ್ತದಿಂದ ಸ್ವೀಕರಿಸಿ ಮುನ್ನಡೆಯಬೇಕೆಂಬ ಒಳಾರ್ಥವನ್ನು ಪ್ರಕೃತಿಯು ತೋರಿಸಿಕೊಡುವ ಪ್ರಾತ್ಯಕ್ಷಿಕೆ ಇದ್ದಂತಿದೆ. ಹೌದಲ್ಲವೇ? ಎಲೆಗಳೆಲ್ಲ ನಿತ್ಯ ಕಾರ್ಯಗಳನ್ನು ನಿರ್ವಹಿಸಿ, ಕಡೆಗೆ ಮುದಿತನಕ್ಕೆ ತಿರುಗಿ, ಅಂಟಿಕೊಂಡಿರಲು ತ್ರಾಣ ಕಳೆದುಕೊಂಡು ಒಣಗಿ ಉದುರುವ ಹಾಗೆ, ಹೊಸ ಚಿಗುರಿಗೆ ದಾರಿ ಮಾಡಿ ಕೊಟ್ಟ ಹಾಗೆ ನಮ್ಮ ಬದುಕು ಕೂಡಾ. ಪ್ರತಿಯೊಂದು ಒಳಿತು ಕೆಡಕುಗಳೆಲ್ಲ ಒಣಗಿ ಉದುರುವ ಎಲೆಯಂತೆ ಸ್ಮೃತಿ ಪಟಲದಿಂದ ಕೆಳಗೆ ಜಾರಿ ಬಿಡುತ್ತವೆ. ಹೊಸ ಅನುಭವಕೆ, ಹೊಸತನಕೆ ದಾರಿ ಮಾಡಿ ಕೊಡುತ್ತದೆ. ಅದರ ಸೂಚಕವಾಗಿ ಬೇವು-ಬೆಲ್ಲದ ಮಿಶ್ರಣ ಮಾಡಿ, ಅದನ್ನು ಬಂಧು-ಬಾಂಧವರಿಗೆ, ಆಪ್ತರಿಗೆ ಹಂಚುವ ಮೂಲಕ ಸಿಹಿ-ಕಹಿಗಳೆರೆಡನ್ನೂ ಸಮಾನವಾಗಿ ಸ್ವೀಕರಿಸುವ ಭಾವದೊಂದಿಗೆ ಶುಭ ಕೋರುವುದು ಸಂಪ್ರದಾಯವಾಗಿದೆ. ಅದು ನಿಜವೇ. ಕೇವಲ ಸುಖದ ಏಕ ಮುಖಿ ಬದುಕು ನಮ್ಮದಾಗಿಲ್ಲ. ಜೊತೆಗೆ ದುಃಖದ ಮುಖವನ್ನೂ ಒಳಗೊಂಡಿದೆ. ಹಾಗಾಗಿ ಎರೆಡಕ್ಕೂ ಮಾನಸಿಕವಾಗಿ ಸದೃಢರಾಗಿರಲು ಈ ಮೂಲಕ ಸಂದೇಶವನ್ನು ನಮ್ಮ ಹಿರಿಯ ತಲೆಮಾರಿನವರು ಬಿಟ್ಟು ಹೋದ ಅಮೂಲ್ಯ ವಿಚಾರಧಾರೆಯ ಪ್ರತೀಕವಾಗಿದೆ.
ಚೈತ್ರ ಮಾಸವು ಹಲವು ವಿಶೇಷತೆಗಳ ಹಂದರದ ಕೆಳಗಿದೆ. ಇದಕ್ಕೆ ಪೌರಾಣಿಕ, ಧಾರ್ಮಿಕ ಪರಂಪರೆಗಳ ಸ್ಪರ್ಶ ಕೊಡಲಾಗಿದೆ. ಹಲವು ನಂಬಿಕೆಗಳು ಪ್ರಚಲಿತದಲ್ಲಿವೆ. ವಾಸ್ತವ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾದುದೆಂದರೆ ಋತುಮಾನಗಳಿಗನುಗುಣವಾಗಿ ಪರಿಸರದಲ್ಲಿನ ಸಕಲ ಜೀವಿಗಳು ಹೊಂದಾಣಿಕೆ ಮಾಡಿಕೊಳ್ಳುವ ಹಂತವಿದು. ಈ ಮಾಸದಲ್ಲಿ ಕಡು ಬಿಸಿಲು ಹೆಚ್ಚಾಗಿರುತ್ತದೆ. ಎಪ್ರಿಲ್, ಮೇ ತಿಂಗಳು ಕಳೆದರೆ, ವರ್ಷಕಾಲ ಆರಂಭವಾಗುತ್ತದೆ. ಮುಂಗಾರು ಮಾರುತಗಳು ಮೈಬಿಚ್ಚಲು ಸತತವಾಗಿ ನೆಲ ಕಾಯಬೇಕು. ಭೂಮಿಯ ಮೇಲಾವರಿಸಿಕೊಂಡ ಸಾಗರಗಳ ನೀರು ಆವಿಯಾಗಿ,ಮೋಡ ಕಟ್ಟಿಕೊಳ್ಳಬೇಕು. ವಾಯು ಕುಸಿತವುಂಟಾಗಿ ಸರಳ ಮಾರ್ಗದೆಡೆ ಸಾಗಬೇಕು. ಅದುವರೆಗೂ ಕಾದು ಬಸವಳಿದು, ಬಿರಿದ ನೆಲ ತಂಪಾಗುತ್ತದೆ. ಇದೇ ಕಾಲದಲ್ಲಿ ಬಿತ್ತನೆ ಮಾಡುವ ಮೂಲಕ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಅದಕ್ಕೆ ಈ ಋತು ಮುನ್ನುಡಿ ಬರೆಯುತ್ತದೆ.
ಕವಿ ಸಮೂಹವಂತೂ ಯುಗಾದಿಯನ್ನು ಕಾವ್ಯದ ವಸ್ತುವನ್ನಾಗಿ ಯಥೇಚ್ಛವಾಗಿ ಬಳಸಿಕೊಂಡಿದ್ದಾರೆ. ಪ್ರಕೃತಿಯ ವರ್ಣನೆ ಸರಾಗವಾಗಿ ಪದಪುಂಜಗಳ ಮುಖೇನ ಹರಿದಿದೆ. ಮಹಾಕವಿಗಳಾದ ಕಾಳಿದಾಸನಿಂದ ಹಿಡಿದು ಪಾಶ್ಚಾತ್ಯ ಕವಿ ವರ್ಡ್ಸ್ವರ್ತ್ ರಂತಹ ನಿಸರ್ಗ ಕವಿಗಳು ಆಯಾ ಋತುಮಾನಗಳನ್ನು ವಿಭಿನ್ನ ನೆಲೆಯಲ್ಲಿ ತಮ್ಮ ಸಾಲುಗಳನ್ನು ಒಡಮೂಡಿಸಿದ್ದಿದೆ. ಅದಮ್ಯವಾಗಿ ಪ್ರಕೃತಿಯನ್ನು ಸವಿದ,ಪಂಪ-ರನ್ನ-ಪೊನ್ನ- ಜನ್ನ, ಮುದ್ದಣ,ಮಂಗೇಶರಾಯರು,ಬೇಂದ್ರೆ ಕುವೆಂಪು,ಮಾಸ್ತಿ,ಪೈಗಳು ಮುಂತಾದವರು ಅದ್ಭುತವಾಗಿ ಬರೆದಿದ್ದಾರೆ. ಗಾಯಕರಂತೂ ಕೋಗಿಲೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಹಾಡಿದ್ದಾರೆ. ಈ ಸೊಬಗು ಮಾಸದ ಹಾಗೆ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ.
2023 ರ ಯುಗಾದಿ ಹಬ್ಬವು ಇಂದು ಮಾರ್ಚ್ 21 ಮಂಗಳವಾರ ರಾತ್ರಿ 10:50 ರಿಂದ ಪ್ರಾರಂಭವಾಗಿದ್ದು ಮುಕ್ತಾಯ 2023 ರ ಮಾರ್ಚ್ 22 ರ ಬುಧವಾರ ರಾತ್ರಿ 8:20 ಕ್ಕೆ. ಹಾಗಾಗಿ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಸುಣ್ಣ -ಬಣ್ಣ ಬಳಿದು, ಮನೆಯನ್ನು ಸಿಂಗಾರಗೊಳಿಸುವುದು, ಮನೆ ದೇವರ ಸಾಮಾಗ್ರಿಗಳನ್ನು ತಿಕ್ಕಿ ತೊಳೆದು, ಮಟ್ಟಸವಾಗಿ ಅಲಂಕಾರಗೊಳಿಸಿ, ಭಕ್ತಿ ಭಾವದಿಂದ ಪೂಜಿಸುವ ಪರಿಪಾಠ ಭಾರತೀಯರಲ್ಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ