ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಮಗೆ ನ್ಯಾಯದೇವತೆಯ ಮೇಲೆ ಶ್ರದ್ಧೆ ಇತ್ತು. ಹಿಂದೂ ಸಮಾಜದ ಅನೇಕ ಪೀಳಿಗೆಗಳಿಗೆ ನೂರಾರು ವರ್ಷಗಳಿಂದ ನ್ಯಾಯದ ನಿರೀಕ್ಷೆಯಲ್ಲಿದ್ದ ಶ್ರೀರಾಮಜನ್ಮಭೂಮಿಗೆ ಇಂದು ನ್ಯಾಯ ಸಿಕ್ಕಿದೆ. ಪ್ರಭು ಶ್ರೀರಾಮನೇ ನಮಗೆ ನ್ಯಾಯವನ್ನು ದೊರಕಿಸಿಕೊಟ್ಟಿದ್ದಾನೆ ಎಂದು ನಮ್ಮ ಭಾವನೆಯಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಪ್ರತಿಕ್ರಿಯಿಸಿದ್ದಾರೆ.
ಈ ತೀರ್ಪಿನ ಶ್ರೇಯಸ್ಸು ದೇವಸ್ಥಾನಕ್ಕಾಗಿ ಅಖಂಡವಾಗಿ ಹೋರಾಟ ನಡೆಸಿದ ಹಿಂದೂ ಪೂರ್ವಜರು, ಬಲಿದಾನ ಮಾಡಿದ ಸಾಧು-ಸಂತರು, ಕರಸೇವಕರು ಹಾಗೂ ನ್ಯಾಯಾಲಯದಲ್ಲಿ ದೇವಸ್ಥಾನದ ಪರ ಯೋಗ್ಯ ವಾದ ಮಂಡಿಸಿದ ನ್ಯಾಯವಾದಿಗಳಿಗೆ ಸಲ್ಲಬೇಕು.
ಸರ್ವೋಚ್ಚ ನ್ಯಾಯಾಲಯವೂ ಸಮಯಕ್ಕೆ ಸರಿಯಾಗಿ ತೀರ್ಪನ್ನು ನೀಡಿದ್ದಕ್ಕಾಗಿ ನಾವು ಆಭಾರ ವ್ಯಕ್ತಪಡಿಸುತ್ತೇವೆ.
ಈ ಸಮಯದಲ್ಲಿ ದುರದೃಷ್ಟವೆಂದರೆ ದೇಶದಲ್ಲಿ ಎಲ್ಲರೂ ಶಾಂತಿಯ ಕರೆಯನ್ನು ನೀಡುತ್ತಿರುವಾಗ ತೀರ್ಪನ್ನು ನೀಡುವ ನ್ಯಾಯಾಧೀಶರ ಭದ್ರತೆಯನ್ನು ಹೆಚ್ಚಿಸಬೇಕಾಗುತ್ತಿದೆ. ಸುನ್ನಿ ವಕ್ಫ್ ಬೋರ್ಡ್‌ಗೆ ಮಸೀದಿಗಾಗಿ ಅಯೋಧ್ಯೆಯಲ್ಲಿ ೫ ಎಕರೆ ಸೂಕ್ತ ಪರ್ಯಾಯ ಭೂಮಿಯನ್ನು ನೀಡುವಂತಹ ನಿರ್ಣಯವು ಮೊದಲ ನೋಟಕ್ಕೆ ತಿಳಿಯದಂತಾಗಿದೆ. ಆದರೂ ಇಂದು ಸಿಕ್ಕಿದ ಆನಂದ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಮಹತ್ವದ್ದಾಗಿದೆ. ಕಾಶಿ ಮತ್ತು ಮಥುರಾದಂತಹ ಇತರ ದೇವಸ್ಥಾನಗಳ ಪ್ರಕರಣಗಳಲ್ಲಿಯೂ ಆದಷ್ಟು ಬೇಗನೆ ನಮಗೆ ನ್ಯಾಯ ಸಿಗುವುದು ಎಂದು ನಮಗೆ ನ್ಯಾಯಾಲಯದ ಮೇಲೆ ಶ್ರದ್ಧೆ ಇದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ