
ಪ್ರಗತಿವಾಹಿನಿ ಸುದ್ದಿ : 500ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಪ್ರತ್ಯೇಕತಾ ವಾದಿ ಉಗ್ರರ ಗುಂಪು ಇಂದು ಹೈಜಾಕ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಬೋಲಾನ್ ಪ್ರದೇಶದಲ್ಲಿ ನಡೆದ ಈ ಕೃತ್ಯದ ಬಗ್ಗೆ ಬಲೂಚ್ ಲಿಬರೇಶನ್ ಆರ್ಮಿ (BLA) ಭಯೋತ್ಪಾದಕರ ಗುಂಪು ಹೊಣೆ ಹೊತ್ತುಕೊಂಡಿದೆ. ರೈಲು ಹೈಜಾಕ್ ಆಗಿರುವ ಸುದ್ದಿ ತಿಳಿದು ಪಾಕಿಸ್ತಾನದ ಸೇನೆ ಸ್ಥಳಕ್ಕೆ ದೌಡಾಯಿಸಿದೆ. ಈ ವೇಳೆ ಉಗ್ರರು ಮತ್ತು ಸೈನಿಕರ ನಡುವೆ ನಡೆದ ಕಾದಾಟದಲ್ಲಿ 6 ಜನ ಸೈನಿಕರನ್ನು ಉಗ್ರರು ಹತ್ಯೆ ಮಾಡಿ, 120ಕ್ಕೂ ಅಧಿಕ ಪ್ರಯಾಣಿಕರನ್ನು ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.
ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಸ್ತುಂಖ್ಯಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಈ ರೈಲಿನ ಮೇಲೆ ಗುಂಡಿನ ದಾಳಿ ನಡೆಸಿ ಹೈಜಾಕ್ ಮಾಡಲಾಗಿದ್ದು, ಇದರಲ್ಲಿ ಪೊಲೀಸರು, ಪಾಕ್ ಮಿಲಿಟರಿ, ಭಯೋತ್ಪಾದಕ ನಿಗ್ರಹ ದಳ, ಐಎಸ್‌ಐ ಕರ್ತವ್ಯ ನಿರತ ಸಿಬ್ಬಂದಿ ಇದ್ದಾರೆಂದು ತಿಳಿದುಬಂದಿದೆ. ತಮ್ಮ ವಿರುದ್ಧ ಸೇನೆ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ. ಈ ರಕ್ತಪಾತದ ಸಂಪೂರ್ಣ ಜವಾಬ್ದಾರಿ ಸೇನೆಯೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ರಕ್ತಪಾತದ ಎಚ್ಚರಿಕೆಯನ್ನು ಉಗ್ರರು ನೀಡಿದ್ದಾರೆ.