
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕರ್ನಾಟಕದಲ್ಲಿ ನಮ್ಮ ಕಣ್ಣಮುಂದೆಯೇ ಬಿಜೆಪಿ ಹಾಳಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿ ಸಿಲುಕಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ನನಗೆ ಮಾತ್ರವಲ್ಲ ಎಸ್.ಎ.ರಾಮದಾಸ್ ಅವರಿಗೂ ಟಿಕೆಟ್ ಕೈತಪ್ಪಿಸಿದ್ದು ಬಿ.ಎಲ್.ಸಂತೋಷ್ ಅವರೇ. ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಸ್ಪರ್ಧೆ ಮಾಡಿದರೆ ಗೆಲ್ಲುತ್ತಾರೆ ಎಂಬುದು ಗೊತ್ತಿದೆ. ಆದರೆ ರಾಮದಾಸ್ ಅವರು ಬಿ.ಎಲ್.ಸಂತೋಷ್ ಅವರ ಆಪ್ತರಲ್ಲ, ಹಾಗಾಗಿ ರಾಮದಾಸ್ ಅವರಿಗೆ ಬಿ.ಎಲ್.ಸಂತೋಷ್ ಟಿಕೆಟ್ ಕೈತಪ್ಪಿಸಿದ್ದಾರೆ ಎಂದು ಆರೋಪಿಸಿದರು.
ಕೋರ್ ಕಮಿಟಿಯಲ್ಲಿ ನಳೀನ್ ಕುಮಾರ್ ಕಟೀಲು ಹೆಸರು ಸೇರಿಸಿದ್ದೇ ಬಿ.ಎಲ್. ಸಂತೋಷ್. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವಧಿ ಮುಗಿದಿದೆ. ಆದರೂ ಅಧ್ಯಕ್ಷರ ನೇಮಕ ಮಾಡಿಲ್ಲ, ಬಿ.ಎಲ್.ಸಂತೋಷ್ ಹೇಳಿದಂತೆ ಕಟೀಲು ಕೇಳ್ತಾರೆ. ಹಾಗಾಗಿ ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ಕೆಲ ದಿನಗಳ ಹಿಂದೆ ನಳೀನ್ ಕಟೀಲ್ ಅವರು ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಬಿಎಸ್ ವೈ ಕಾಲ ಮುಗೀತು, ಈಶ್ವರಪ್ಪ, ಶೆಟ್ಟರ್ ಮುಗಿಸ್ತೀವಿ ಎಂದಿದ್ದರು ಈಗ ಅದೇ ರೀತಿ ಆಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ