ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಗದೀಶ್ ಶೆಟ್ಟರ್ ಗೆ ಬಿಜೆಪಿಯಲ್ಲಿ ಎಲ್ಲಾ ಸ್ಥಾನ ಮಾನ ನೀಡಲಾಗಿತ್ತು, ರಾಜ್ಯಾಧ್ಯಕ್ಷರು, ಶಾಸಕರು, ಸಚಿವರು, ಸಿಎಂ ರನ್ನಾಗಿ ಮಾಡಲಾಗಿತ್ತು. ಆದರೂ ರಾಜೀನಾಮೆ ನೀಡಿರುವುದು ಸರಿಯಲ್ಲ, ಇದು ಪಕ್ಷಕ್ಕೆ ಮಾಡಿರುವ ದ್ರೋಹ ಎಂಬ ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ಟಾಂಗ್ ನೀಡಿರುವ ಜಗದೀಶ್ ಶೆಟ್ಟರ್, ಹಿಂದೆ ಯಡಿಯೂರಪ್ಪವರಿಗೂ ಪಕ್ಷ ಎಲ್ಲಾ ಸ್ಥಾನಮಾನ ನೀಡಿದ್ದರೂ ಯಾಕೆ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದರು? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಯಡಿಯೂರಪ್ಪನವರಿಗೆ ಎಲ್ಲಾ ಸ್ಥಾನಮಾನ ನೀಡಿದ್ದರೂ ಯಾಕೆ ಪಕ್ಷ ಬಿಟ್ಟು ಹೋಗಿದ್ರು? ಇರಲಿ ಈಗ ವಾದ ವಿವಾದ ಬೇಡ. ಈ ಹಿಂದೆ ಮೊನ್ನೆವರೆಗೂ ಯಡಿಯೂರಪ್ಪನವರು ನನ್ನ ಪರವಾಗಿ ಮಾತನಾಡುತ್ತಿದ್ದವರು, ವರಿಷ್ಠರ ಬಳಿಯೂ ನನ್ನ ಪರವಾಗಿ ಹೇಳಿಕೆಗಳನ್ನು ಕೊಟ್ಟವರು ಈಗ ಹೀಗೆ ಹೇಳುತ್ತಿದ್ದಾರೆ ಅಂದ್ರೆ ಏನರ್ಥ? ಹೈಕಮಾಂಡ್ ಸೂಚನೆಯಂತೆ ಹೇಳಿಕೆ ನೀಡುತ್ತಿರಬಹುದು ಎಂದಿದ್ದಾರೆ.
ಅಧಿಕಾರ ಇಲ್ಲದ ಸಂದರ್ಭದಲ್ಲಿಯೂ ಪಕ್ಷ ಸಂಘಟನೆ ಮಾಡಿದ್ದೇವೆ. ಪಕ್ಷಕ್ಕಾಗಿ ದುಡಿದಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ, ಅನಂತ್ ಕುಮಾರ್ ನೇತೃತ್ವದಲ್ಲಿ ಕೆಲಸ ಮಾಡಿದ್ದೇವೆ. ಆದರೆ ಇಂದು ನಮ್ಮ ಮನೆಯಿಂದ ನಮ್ಮನ್ನೇ ಹೊರಹಾಕುವ ಮಾತನಾಡಿದ್ದಾರೆ. ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ ಬೇರೆಯವರನ್ನು ಬಲಿ ಕೊಡುವ ಷಡ್ಯಂತ್ರ ನಡೆಸಿದ್ದಾರೆ. ಪಕ್ಷ ಕಟ್ಟಿ ಬೆಳೆಸಿದವರನ್ನೇ ಮನೆಯಿಂದ ಹೊರಹಾಕಿದ್ದಾರೆ. ನನಗೆ ಸಿಎಂ ಹುದ್ದೆ ಸೇರಿದಂತೆ ಯಾವ ಹುದ್ದೆಯೂ ಬೇಡ, ಅಧಿಕಾರದ ದಾಹ ನನಗಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ