*ಬಿಜೆಪಿಯ ಗುಲಾಮಗಿರಿ ನಾನು ಒಪ್ಪಲಿಲ್ಲ; ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಗುಲಾಮಗಿರಿ ಸಂಕೇತ; ಕೇಸರಿ ಪಾಳಯದ ವಿರುದ್ಧ ಮತ್ತೆ ಕಿಡಿಕಾರಿದ ಜಗದೀಶ್ ಶೆಟ್ಟರ್*
ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ವಿಚಾರ, ಸ್ವಾಭಿಮಾನಕ್ಕೆ ಧಕ್ಕೆಯಾದ ವಿಷಯವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ಮಾತು ಹೇಳಿದ್ದರು. ಶೆಟ್ಟರ್ ಅವರೆ ನೀವು ಭ್ರಷ್ಟಾಚಾರಿ ಅಲ್ಲ, ಅದಕ್ಕೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ ಎಂದು. ಅದು ನಿಜ. ಬಿಜೆಪಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಟಿಕೆಟ್ ಸಿಗದಂತೆ ಕೈತಪ್ಪಿಸಿತು. ಕ್ಷೇತ್ರದ ಜನತೆಗೂ ಅವಮಾನ ಮಾಡಿದೆ. ಇದೇ ಕಾರಣಕ್ಕೆ ನಾನು ಬಿಜೆಪಿ ತೊರೆಯಬೇಕಾಯಿತು ಎಂದರು.
6 ಬಾರಿ ಗೆಲ್ಲಿಸಿದ ಕ್ಷೇರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅದು ಗುಲಾಮಗಿರಿ ಸಂಕೇತ. ಬಿಜೆಪಿಯವರ ಗುಲಾಮಗಿರಿ ನಾನು ಒಪ್ಪಲಿಲ್ಲ. ಶೆಟ್ಟರ್ ಮತ್ತೆ ಗೆದ್ದರೆ ಮುಂದೆ ಹೋಗ್ತಾರೆ ಎಂದು ಕೆಲವರಿಗೆ ಆತಂಕ ಶುರುವಾಗಿತ್ತು. ಹೀಗಾಗಿ ನನ್ನನ್ನು ಪಕ್ಷದಿಂದ ಹೊರಕಳುಹಿಸಲು ಸಂಚು ರೂಪಿಸಿದರು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನನ್ನನ್ನು ಗೌರವಯುತವಾಗಿ ನಡೆಸಿಕೊಂಡರೆ ಸಾಕು ಎಂದಿದ್ದೇನೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಬಿಜೆಪಿಯವರಿಗೆ ಯಾವುದೇ ನೈತಿಕತೆಯಿಲ್ಲ, ಅವರು ಬಿಡುಗಡೆ ಮಾಡಿರುವ ಪ್ರಣಾಳಿಕೆಗಳಿಗೂ ಯಾವ ಮಹತ್ವ ಕೊಡಬೇಕಿಲ್ಲ. ಈಗಾಗಲೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣದಿಂದಲೇ ಯೋಜನೆಗಳು ಜಾರಿಗೆ ಬರಲಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ