Kannada NewsLatest

ನಮ್ಮೂರ ಓಕುಳಿ ಬಲು ಜೋರು..!

ಪ್ರಗತಿವಾಹಿನಿ ಸುದ್ದಿ; ಬೆಟಗೇರಿ: ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಓಕುಳಿಗೆ ಶತಮಾನಗಳ ಐತಿಹಾಸಿಕ ಇತಿಹಾಸವಿದೆ. ಪ್ರತಿ ವರ್ಷಕ್ಕೊಮ್ಮೆ ಜರುಗುವ ಹನುಮಂತ ದೇವರ ಓಕುಳಿ ಸರ್ವ ಧರ್ಮದ ಸಮನ್ವಯದ ಪ್ರತೀಕವಾಗಿದೆ. ಇಲ್ಲಿಯ ಹನುಮಂತ ದೇವರ ಓಕುಳಿ ಪ್ರಯುಕ್ತ ಮೇ.14 ರಿಂದ ಮೇ.17ರ ವರೆಗೆ ವಿವಿಧ ಕಾರ್ಯಕ್ರಮಗಳು ವಿಜೃಂಭನೆಯಿಂದ ಕಡೆ ಓಕುಳಿ ನಡೆಯಲಿವೆ.

ಪ್ರಾಣಿ,ಪಕ್ಷಿಗಳ ಸೋಗಿನ ಕುಣಿತ: ಸೋಮವಾರ ಮೇ.16 ರಂದು ಕಡೆ ಓಕುಳಿ ದಿನ ಸಂಜೆ 5 ಗಂಟೆಗೆ ಕುದುರೆ, ನವಿಲು, ಗರುಡ, ಕರಡಿ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳ ಸೋಗಿನ ಐದಾರು ಮಜಲು(ಗುಂಪು)ಗಳ ಯುವಕರು ಕಾಲಿಗೆ ಮರಗಾಲು ಕಟ್ಟಿಕೊಂಡು ವಾಧ್ಯಮೇಳಗಳ ತಾಳಕ್ಕೆ ತಕ್ಕಂತೆ ಕುಣಿಯುವ ಕುಣಿತ ನೋಡುಗರ ಕಣ್ಮನ ತಣಿಸುತ್ತದೆ. ಹತ್ತು ಸಾವಿರಕ್ಕೂ ಹೆಚ್ಚು ಜನ ಓಕುಳಿ ನೋಡಲು ಸೇರುತ್ತಾರೆ. ಬಣ್ಣದೊಕುಳಿ ಬಳಿಕ ಮಕ್ಕಳು, ಯುವಕರು, ವೃದ್ಧರು ಸಹ ಉತ್ಸಾಹದಿಂದ ಓಕುಳಿಯಲ್ಲಿ ನೀರು ಎರುಚುತ್ತಾರೆ. ಮಹಿಳೆಯರು, ಮಕ್ಕಳು, ವೃದ್ಧರು ಸಹಿತ ಸುಮಾರು ಮೂರ್ನಾಲ್ಕು ಗಂಟೆಗಳವರೆಗೆ ಒಂಟೆಗಾಲಲ್ಲಿ ನಿಂತುಕೊಂಡು ಓಕುಳಿಯ ಸೋಬಗನ್ನು ಸವಿಯುತ್ತಾರೆ.

ನೈವೇದ್ಯ ಸಮರ್ಪಣೆ: ಹಸಿರು ತಳಿರು ತೋರಣ, ವಿದ್ಯುತ್ ದೀಪ್‍ಗಳಿಂದ ಗ್ರಾಮದ ಕೆಲವು ಬೀದಿಗಳು ಅಲಂಕಾರಗೊಂಡು ಕಂಗೊಳಿಸುತ್ತವೆ. ಪ್ರತಿ ಓಣಿಯ ಎಲ್ಲ ಮನೆಯವರು ಸಾಮೂಹಿಕವಾಗಿ ಬಾಜಾ-ಭಜಂತ್ರಿಗಳ ಸಕಲ ವಾಧ್ಯಮೇಳಗಳೊಂದಿಗೆ ಇಲ್ಲಿಯ ಮಾರುತಿ ದೇವರ ದೇವಾಲಯಕ್ಕೆ ತೆರಳಿ ನೈವೇದ್ಯ, ಪೂಜೆ, ಪುನಸ್ಕಾರ, ಹರಕೆ ಸಮರ್ಪಿಸುವದು ವಾಡಿಕೆ.

ಓಕುಳಿ ನೋಡುವುದಕ್ಕಾಗಿ ಬೆಟಗೇರಿಗೆ ಬೀಗುತನ : ನಾಡಿನ ಹಲವು ಜಿಲ್ಲೆಯ ಹಳ್ಳಿಗಳ ಜನರು ಬೆಟಗೇರಿ ಜಾಗೃತ ಹನುಮಂತ ದೇವರ ಓಕುಳಿಯ ಸಡಗರ ಸಂಭ್ರಮ ನೋಡುವ ಸಲುವಾಗಿಯೇ ಈ ಊರಿಗೆ ಹಿಂದೆ ಹಲವು ಕುಟುಂಬಗಳಿಗೆ ಬೀಗತನ ಮಾಡಿದ್ದು ಸಾಕಷ್ಟು ಉದಾಹರಣೆಗಳಿವೆ ಎಂದು ಬೆಟಗೇರಿ ಓಕುಳಿ ಮತ್ತು ಬೀಗತನದ ಭಾಂದವ್ಯ ಬೆಸುಗೆಯ ವೈಶಿಷ್ಟೆತೆ ಕುರಿತು ಗ್ರಾಮದ ಹಿರಿಯ ನಾಗರಿಕ ಪತ್ರೇಪ್ಪ ನೀಲಣ್ಣವರ ಹೇಳುವ ಮಾತಿದು.

ಹೋಳಿಗೆ ಊಟದ ಸವಿ: ಬೆಟಗೇರಿ ಗ್ರಾಮದಲ್ಲಿ ಒಂದು ವಾರದಿಂದ ಎಲ್ಲರ ಮನೆ-ಮನೆಗಳಲ್ಲಿ ಓಕುಳಿಯ ಸಡಗರ ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಪ್ರತಿ ಮನೆಯಲ್ಲಿ ಓಕುಳಿ ಪ್ರಯುಕ್ತ ಮನೆಯ ಹೆಣ್ಣು ಮಕ್ಕಳನ್ನು ತಪ್ಪದೇ ತವರಿಗೆ ಕರೆತರುವುದು, ಬೀಗ-ಬಿಜ್ಜರ, ಬಂದು, ಬಾಂಧವರ ಸಮಾಗಮದ ಸಂಗಮವಾಗುತ್ತದೆ. ಉಡುಗೆ, ತೊಡುಗೆಯಲ್ಲಿಯೂ ಸಹ ಹೊಸತನ ಕೊಡಿರುತ್ತದೆ. ಕಡೆ ಓಕುಳಿ ದಿನ ಸ್ಥಳೀಯ ಪ್ರತಿ ಮನೆಗಳಲ್ಲಿ ನಾನಾ ಬಗೆಯ ಮೃಷ್ಟಾನ್ನ ಭೋಜನ ತಯಾರಿಸಿ, ಗ್ರಾಮದ ಅಕ್ಕ-ಪಕ್ಕದ ಮನೆಯವರು, ಬಂಧು, ಬಾಂದವರು, ಆಪ್ತ ಮಿತ್ರರು ಒಟ್ಟಿಗೆ ಕುಳಿತು ಊಟ ಮಾಡುವುದು, ಊಣಬಡಿಸುವ ಸಡಗರ ಹೇಳತಿರದು.

ಮನರಂಜನೆ ಆಯೋಜನೆ: ಓಕುಳಿ ಪ್ರಯುಕ್ತ ರಂಗಭೂಮಿ ಕಲೆ ವಿವಿಧ ನಾಟಕ ಸೇರಿದಂತೆ ಮನರಂಜನೆಯ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ. ಸ್ಟೇಸನರಿ ಅಂಗಡಿಗಳು ಸೇರಿದಂತೆ ಹಲವಾರು ಆಟಕೆಗಳ ಛತ್ರಗಳು ಮಕ್ಕಳಿಗೆ ಮನರಂಜನೆಗಾಗಿ ಊರಲ್ಲಿ ಬಂದು ಜಮಾಯಿಸಿರುತ್ತವೆ. ಮಾರುತಿ ದೇವರ ದೇವಾಲಯದ ಮುಂದೆ ರಾತ್ರಿ ಹಾರಿಸುವ ಸಿಡಿ ಮದ್ದುಗಳ ರಂಗು ರಂಗಿನ ಚಿತ್ತಾರ ಬಾನಂಗಳದಲ್ಲಿ ನೋಡುಗರ ಕಣ್ಮನ ತಣಿಸುತ್ತದೆ. ಹೀಗಾಗಿ ಬೆಟಗೇರಿ ಹನುಮಂತ ದೇವರ ಓಕುಳಿ ಪ್ರತಿ ವರ್ಷ ಮೇ ಇಲ್ಲವೇ ಜೂನ್ ತಿಂಗಳಲ್ಲಿ ತನ್ನದೇ ಆದ ವೈಶಿಷ್ಟಪೂರ್ಣ ಸಡಗರ, ಸಂಭ್ರಮದಿಂದ ಆಚರಿಸಲ್ಪಡುತ್ತದೆ.

ಓಕುಳಿ ವಿವಿಧ ಕಾರ್ಯಕ್ರಮಗಳು: ಮೇ.14ರಂದು ಮುಂಜಾನೆ 7 ಗಂಟೆಗೆ ಸ್ಥಳೀಯ ಮಾರುತಿ ದೇವರ ನೂತನ ದೇವಾಲಯ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ದಾನಿಗಳಿಗೆ, ಗಣ್ಯರಿಗೆ ಸತ್ಕಾರ, ಮಹಾಪ್ರಸಾದ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಂಜೆ 8 ಗಂಟೆಗೆ ಓಕುಳಿ ಕೊಂಡ ಪೂಜೆ, ನಂತರ ಕರಡಿ, ಹಲಗೆ ಮಜಲು ಸೇರಿದಂತೆ ಸಕಲ ವಾಧ್ಯಗಳ ವಾದನ, ಪಲ್ಲಕ್ಕಿ ಉತ್ಸವ ನಡೆಯಲಿದೆ.

ಮೇ.15ರಂದು ಮುಂಜಾನೆ 6 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 5 ಗಂಟೆಗೆ ನಡು ಓಕುಳಿ. ಮೇ.16ರಂದು 8 ಗಂಟೆಯಿಂದ ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ, ಹರಕೆ ಸಮರ್ಪಣೆ ನಡೆದು, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡಕ್ಕೆ ಸ್ಥಳೀಯ ವಿವಿಧ ದೇವರÀ ಪಲ್ಲಕ್ಕಿ ಪ್ರದಕ್ಷೀಣೆ ಬಳಿಕ ಕಡೆ ಓಕಳಿ, ವಿವಿಧ ಪ್ರಾಣಿಗಳ ಸೊಗಿನ ಕುಣಿತದ ಪ್ರದರ್ಶನ, ಅದೇ ದಿನ ರಾತ್ರಿ 10 ಗಂಟೆಗೆ ಸ್ಥಳೀಯ ಜೈ ಹನುಮಾನ ನಾಟ್ಯ ಸಂಘದವರಿಂದ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್ ನಾಟಕ ಪ್ರದರ್ಶನ ಜರುಗಲಿದೆ.

ಮಂಗಳವಾರ ಮೇ.17ರಂದು ಮುಂಜಾನೆ 7 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 4 ಗಂಟೆಗೆ ಜಂಗಿ ಕುಸ್ತಿಗಳು ನಡೆದ ಬಳಿಕ ಸಂಜೆ ಮಾರುತಿ ದೇವರ ದೇವಾಲಯಕ್ಕೆ ಪಲ್ಲಕ್ಕಿ ಪ್ರರ್ದಕ್ಷಣೆ ನಡೆಯಲಿದೆ ಎಂದು ಇಲ್ಲಿಯ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಪಾರಾಯಣ ಸೋಹಳ ಹಾಗೂ ಮಹಾಪ್ರಸಾದ ಸೇವೆಗೆ ಚಾಲನೆ​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button