Kannada NewsKarnataka News

ಜೈನ ಧರ್ಮ ಪವಿತ್ರ ಧರ್ಮ: ಸಿಎಂ ಬೊಮ್ಮಾಯಿ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಜೈನ ಧರ್ಮ ಅತ್ಯಂತ ಪವಿತ್ರ ಧರ್ಮವಾಗಿದ್ದು, ಭಗವಾನ್ ಮಹಾವೀರರು ನಮಗೆ ಸ್ಪೂರ್ತಿ ಮತ್ತು ಪ್ರೇರಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಹೊಸೂರು ಜೈನ್ ಬಸದಿ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿದರು ಹಾಗೂ  ಶ್ರೀ ಪಟ್ಟಾಚಾರ್ಯ ಲಕ್ಷ್ಮಿ ಸೇನ ಮಹಾರಾಜರು ಕೊಲ್ಲಾಪುರ ಮತ್ತು ಶ್ರೀ ಸ್ವಸ್ತಿಕ ಜೀವಸೇನ ಭಟ್ಟಾರಕ ಸ್ವಾಮೀಜಿ, ನಾಂದಿನಿ , ಇವರ ಬೆಳಗಾವಿ ಮಂಗಲಪುರ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
 ಹಿಂದೂ, ಬೌಧ, ಸಿಖ್, ಜೈನ್ ಧರ್ಮಗಳು ಹುಟ್ಟಿದ್ದೇ ಭಾರತ ವರ್ಷದಲ್ಲಿ. ಜೈನ ಧರ್ಮ ಅತ್ಯಂತ ಪವಿತ್ರ ಧರ್ಮ. ಸಣ್ಣ ಕೀಟಗಳನ್ನು ನಾಶ ಮಾಡಬಾರದು ಅಂತ ಭಾವಿಸುವುದು ಜೈನ ಧರ್ಮ. ಎಲ್ಲಿ ಅಹಿಂಸೆ ಇದೆ ಅಲ್ಲಿ  ಪಾವಿತ್ರ್ಯತೆ ಇದೆ, ಪುಣ್ಯ ಇದೆ‌ ಪುಣ್ಯ ಇದ್ದಲ್ಲಿ ಸ್ವರ್ಗ ಇದೆ ಎಂದರು.
*ತ್ಯಾಗದ ಧರ್ಮ :*
ಮಹಾವೀರರು ತ್ಯಾಗಮೂರ್ತಿ, ರಾಜಮನೆತನದಲ್ಲಿ ಹುಟ್ಡಿದರು ತ್ಯಾಗ‌ಮೂರ್ತಿ, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಕಾಡಿಗೆ ಹೋಗುವಾಗ ಎಲ್ಲವನ್ನು ಹಂಚುತ್ತಾರೆ.
ಅವರು ಕಾಡಿಗೆ ಹೋಗುವಾಗ ಒಬ್ಬ ಕುಂಟ ಅವರ ಬಳಿ ಬಂದು ನನಗೆ ಏನು ಕೊಡುತ್ತೀರಾ ಎಂದು ಕೇಳುತ್ತಾನೆ. ಅವರು ಅವನಿಗೆ ತಾವು ತೊಟ್ಟ ಬಟ್ಟೆಯ ಮೆಲಿನ ಭಾಗವನ್ನು ಕೊಡುತ್ತಾರೆ.
ಮುಂದೆ ಹೋಗುವಾಗ ಮುಳ್ಳಿನ ಕಂಟಿಗೆ ಬಟ್ಟೆ ಸಿಲುಕುತ್ತದೆ. ಆಗ ಮಹಾವಿರರು ಉಟ್ಟ ಬಟ್ಡೆಯನೆಲ್ಲ ಬಿಟ್ಟು ತಪಸ್ಸಿಗೆ ಹೋಗುತ್ತಾರೆ. ಇಂತ ತ್ಯಾಗದ ಧರ್ಮ ಇನ್ನೊಂದು ಧರ್ಮ ಜಗತ್ತಿನಲ್ಲಿಲ್ಲ. ಜೈನ ಧರ್ಮದ ಪುಣ್ಯಾತ್ಮರು ಪುರ ಪ್ರವೇಶ ಮಾಡಿದ್ದಾರೆ. ಅವರನ್ನು ಗೌರವದಿಂದ ಸ್ವಾಗತಿಸಲಾಗಿದೆ ಎಂದರು.
*ಅರಟಾಳ ದಲ್ಲಿ ಯಾತ್ರಿ ನಿವಾಸ :*
ಜೈನ ಧರ್ಮದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದೇನೆ. ಅಧ್ಯಾತ್ಮಕ ಚಿಂತನೆ ಬಗ್ಗೆ ಅರಿತಿದ್ದೇನೆ. ನನ್ನ ಕ್ಷೇತ್ರದಲ್ಲಿ ಅರಟಾಳ್ ಎಂಬ ಹಳ್ಳಿ ಇದ್ದು, ಅಲ್ಲಿ  ಜೈನ ಬಸದಿ, ಸಮುದಾಯ ಭವನ ಕೂಡ ನಿರ್ಮಾಣವಾಗಿದೆ.
1.50 ಕೋಟಿ ರೂ.ಗಳ ವೆಚ್ಚದಲ್ಲಿ ಯಾತ್ರಿ ನಿವಾಸವನ್ನೂ ನಿರ್ಮಿಸಲಾಗುತ್ತಿದೆ.  ಎಲ್ಲ ಜೈನ ಮುನಿಗಳು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಭಗವಾನ ಮಹಾವೀರರ ಸಂದೇಶ ಮಾನವ ಕುಲಕ್ಕೆ ಸ್ಪೂರ್ತಿ 
ಇಡಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡಿದ ಭಗವಾನ ಮಹಾವೀರರ ಜೀವನ ಚರಿತ್ರೆಯು ಇಡಿ ಮಾನವ ಕುಲಕ್ಕೆ ಸ್ಪೂರ್ತಿ ನೀಡುವ ಸಂದೇಶವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು .
ಭಗವಾನ ಮಹಾವೀರರು ಅಹಿಂಸೆಯ ಸಂದೇಶ ನೀಡಿರುವುದು ಮಾನವ ಕುಲಕ್ಕೆ . ಒಂದು ಸಣ್ಣ ಜೀವಿಯನ್ನು ಸಹ ಹತ್ಯೆ ಮಾಡಬೇಡ . ಬದುಕು ಮತ್ತು ಬದಕಲು ಬಿಡು ಎಂಬ ಸಂದೇಶ ಇಂದಿಗೂ ಪ್ರಸ್ತೂತವಾಗಿದೆ. ಹಾಗಾಗಿ ಇಂದಿಗೂ ಸಹ ಭಾರತ ದೇಶದಲ್ಲಿ ಅಹಿಂಸೆಯ ತತ್ವಗಳನ್ನು ಪಾಲಿಸಲಾಗುತ್ತದೆ.
ಭಾರತ ದೇಶ ಒಂದು ಆಧ್ಯಾತ್ಮಿಕವಾದ ದೇಶವಾಗಿದೆ. ಇಲ್ಲಿ ಜೈನ , ಬೌದ್ದ ಶೀಖ ಸಂಪ್ರದಾಯಗಳು ಬೆಳೆದು ಬಂದಿದೆ.ಇಂತಹ ಆಧ್ಯಾತ್ಮಿಕ ದೇಶದಲ್ಲಿ ಜೈನ ಧರ್ಮ ತನ್ನದೇ ಆದ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದೆ. ಜೈನ ಮುನಿಗಳು ದಿಗಂಬರರಾಗಿ ಕಾಲ್ನಡಿಗೆಯಲ್ಲಿಯೇ ದೇಶ ಸುತ್ತುತ್ತಾರೆ. ಅವರತಂಹ ತ್ಯಾಗಿಗಳು ನೋಡುವುದು ಮತ್ತು ಅವರ ಆರ್ಶಿವಾದ ಪಡೆಯುವುದು ನಮ್ಮ ಪುರ್ವಜನ್ಮದ ಪುಣ್ಯ ಎಂದು ಹೇಳಬಹುದು ಎಂದರು.
ಇದೀಗ ಬೆಳಗಾವಿಗೆ ಕೊಲ್ಲಾಪೂರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳು ಮತ್ತು ನಾಂದಣಿ ಮಠದ ಜನಸೇನ ಭಟ್ಟಾರಕ ಸ್ವಾಮೀಜಿಗಳು ಆಗಮಿಸಿರುವುದು ಈ ಭಾಗದ ಪುಣ್ಯ. ಇಂತಹ ತಪಸ್ವಿಗಳು ಮೇಲಿಂದ ಮೇಲೆ ಈ ನೆಲದಲ್ಲಿ ಸಂಚರಿಸುತ್ತ ಇದ್ದರೆ ನಮ್ಮ ಭೂಮಿ ಪಾವನವಾಗಲಿದೆ ಎಂದರು .
ಶಾಸಕ ಅಭಯ್ ಪಾಟಿಲ್ , ಸಂಜಯ್ ಪಾಟೀಲ್ ಇಬ್ಬರು ಬೆಳಗಾವಿ ಅಭಿವೃದ್ದಿ ಮಾಡಿದ್ದಾರೆ. ಸಾಕಷ್ಟು ಯೋಜನೆಗಳನ್ನು ತಂದು ಅನುಮತಿ ಪಡೆದುಕೊಂಡು ಹೋಗುತ್ತಾರೆ. ಬಹಳ ಕ್ರಿಯಾಶೀಲ ಶಾಸಕರಾಗಿದ್ದಾರೆ‌. ಅವರಿಗೆ ಗುರುಗಳ ಆಶೀರ್ವಾದ ಮತ್ತು ನಿಮ್ಮ ಆಶೀರ್ವಾದ ಇರಬೇಕು ಎಂದರು.
ಈ ಸಮಾರಂಭವನ್ನು ಆಯೋಜಿಸಿರುವ ಶಾಸಕ ಅಭಯ ಪಾಟೀಲ ಅವರು ಯಾವಾಗಲು ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸುತ್ತ ಬಂದಿದ್ದಾರೆ. ಅವರ ಕಾರ್ಯವೈಖರಿ ಮತ್ತು ಅವರು ದೂರದೃಷ್ಟೀಯಿಂದ ಇಂದು ಬೆಳಗಾವಿ ಸಾಕಷ್ಟು ಅಭಿವೃದ್ದಿ ಕಂಡಿದೆ. ಮಾಜಿ ಶಾಸಕ ಸಂಜಯ ಪಾಟೀಲ ಅವರು ಸಹ ತಮ್ಮ ಆಡಳಿತವಾಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು, ಅಭಿವೃದ್ದಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಳಗಾವಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದರು. ಈ ಸಲ ಅವರು ಮುಖ್ಯಮಂತ್ರಿಯಾಗಿ ಬೆಳಗಾವಿ ಜಿಲ್ಲೆಗೆ ಅದರಲ್ಲೂ ವಿಶೇಷವಾಗಿ ಬೆಳಗಾವಿ ನಗರಕ್ಕೆ ಅನೇಕ ಹೊಸ ಯೋಜನೆಗಳನ್ನು ತರಲು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಬೆಳಗಾವಿ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳು ಹಾಗೂ ಜಿನಸೇನ ಭಟ್ಟಾರಕ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ತದನಂತರ ಬೆಳಗಾವಿ ಜೈನ ಸಮಾಜದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ವಾಮೀಜಿಗಳಿಗೆ ಪಾದಪೂಜೆ ಮಾಡಿ ಅವರನ್ನು ಬೆಳಗಾವಿಗೆ ಬರ ಮಾಡಿಕೊಳ್ಳಲಾಯಿತು. ಮಾಜಿ ಶಾಸಕ ಸಂಜಯ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ವಿನೋದ ದೊಡ್ಡಣ್ಣವರ, ಪುಷ್ಪಕ ಹನಮಣ್ಣವರ, ರಾಜೇಂದ್ರ ಜಕ್ಕನ್ನವರ, ನ್ಯಾಯವಾದಿ ರವಿರಾಜ ಪಾಟೀಲ, ಪ್ರಮೋದ ಪಾಟೀಲ, ಸಚಿನ ಪಾಟೀಲ, ಅಭಯ ಅವಲಕ್ಕಿ, ವಿನಯ ಬಾಳಿಕಾಯಿ , ಸಂಜಯ ರೋಟೆ, ಬಾಬಾಜಿ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಕುಮುದಾ ನಾಗಭೂಷಣ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಲಕ್ಷ್ಮೀಸೇನ ಭಟ್ಠಾರಕ ಶ್ರೀಗಳನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಗೋಮಟೇಶ ವಿದ್ಯಾಪೀಠದಿಂದ ಪ್ರಾರಂಭಗೊಂಡ ಮೆರವಣಿಗೆ ಹಿಂದವಾಡಿ, ಮಹಾವೀರ, ಗೋವಾವೇಸ ಸರ್ಕಲ, ಎಸ್.ಪಿ.ಎಂ. ರಸ್ತೆಯ ಮೂಲಕ ಮಹಾತ್ಮಾ ಫೂಲೆ ರಸ್ತೆಯ ಮೇಲಿ ಕಾರ್ಯಕ್ರಮದ ವೇದಿಕೆಯಲ್ಲಿ ಮುಕ್ತಾಯಗೊಂಡಿತು.
 ಸಚಿವ ಅಶ್ವತ್ಥನಾರಾಯಣ ಮೊದಲಾದವರು ಇದ್ದರು.
https://pragati.taskdun.com/congress-bus-tour-starts-from-janevary-11/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button