*ಜೈನಮುನಿ ಹತ್ಯೆ ಕೇಸ್: ಈ ಅಮಾನವೀಯ ಕೃತ್ಯದ ಹಿಂದೆ ದೊಡ್ಡ ಶಕ್ತಿ ಇರುವ ಸಾಧ್ಯತೆ; ಮಾಜಿ ಸಿಎಂ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪೂರ್ವ ನಿಯೋಜಿತ ಕೊಲೆಯಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪವಾದ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ಸಾಮಾನ್ಯವಾಗಿ ಕೊಲೆಗಡುಕ ಕೊಲೆ ಮಾಡಿ ಓಡಿ ಹೋಗುತ್ತಾರೆ. ಈ ಕೊಲೆ ಮಾಡಿದ ವ್ಯಕ್ತಿ ಅವರನ್ನು ಪೈಶಾಚಿಕವಾಗಿ ಹತ್ಯೆ ಮಾಡಿದ್ದಾರೆ. ಜೈನ ಮುನಿಗಳು ಸಾಮಾನ್ಯವಾಗಿ ಯಾರ ಮನಸಿಗೂ ನೋವಾಗದಂತೆ ಮಾತನಾಡುತ್ತಾರೆ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ. ಇಂತಹ ಮುನಿಗಳ ಹತ್ಯೆಯಾಗಿದ್ದು ನೋಡಿದರೆ ನಾವ್ಯಾರೂ ಈ ಸಮಾಜದಲ್ಲಿ ಬದುಕಲು ಅರ್ಹರಿಲ್ಲ ಅನಿಸುತ್ತದೆ ಎಂದು ಹೇಳಿದರು.
ಇದು ಕೋಲ್ಡ್ ಬ್ಲಡೆಡ್ ಮರ್ಡರ್ ಆಗಿದೆ. ಅವರು ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಲು ಎಷ್ಟು ಸಮಯ ಆಲೋಚನೆ ಮಾಡಿರಬಹುದು. ಇದು ಮುನಿಗಳಿಗೆ ಹತ್ತಿರ ಇದ್ದವರೇ ಮಾಡಿದ್ದಾರೆ. ಹಣಕಾಸಿನ ವ್ಯವಹಾರಕ್ಕೂ ಮುನಿಗೂ ಯಾವುದೇ ಸಂಬಂಧ ಇಲ್ಲ. ಮುನಿಗಳ ಹತ್ಯೆ ಯಾಕೆ ಆಯಿತು ಅಂತ ಪೊಲಿಸರು ಹೇಳುತ್ತಿಲ್ಲ. ಪ್ರಕರಣ ಬೇಗ ಬೇಧಿಸಿದ್ದು ಸರಿ ಆದರೆ, ಪೊಲಿಸರು ಅಷ್ಟು ಬೇಗ ಪ್ರಕರಣ ಮುಕ್ತಾಯ ಮಾಡುವ ರೀತಿ ಮಾತನಾಡಿದ್ದಾರೆ. ಅವರು ಕೊಲೆ ಮಾಡಿ ಅಲ್ಲಿಂದ ಸಾಗಿಸಲು ಕೇವಲ ಇಬ್ಬರು ಮಾತ್ರ ಇರಲು ಸಾಧ್ಯವಿಲ್ಲ. ಅಲ್ಲಿಂದ ಸಾಗಿಸಲು ಯಾವ ವಾಹನ ಬಳಸಿದರು. ಅವರು ಹೆಣ ತುಂಡು ಹೇಗೆ ಮಾಡಿದರು. ಜೈನ ಧರ್ಮ ಯಾವುದೇ ಪ್ರಚೋದನೆ ಮಾಡುವುದಿಲ್ಲ. ಅಂತಹ ಮುನಿಗಳ ಹತ್ಯೆಯಾಗಿದೆ ಅಂದರೆ ಇದರ ಹಿಂದೆ ದೊಡ್ಡ ಶಕ್ತಿ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕಲಬುರ್ಗಿಯಲ್ಲಿ ಮರಳು ಮಾಫಿಯಾದವರು ಹೆಡ್ ಕಾನ್ ಸ್ಟೇಬಲ್ ಹತ್ಯೆ ಮಾಡುತ್ತಾರೆ. ನಂಜನಗೂಡಿನಲ್ಲಿ ನಡೆದ ಹತ್ಯೆ, ಬೀದರ್ ನಲ್ಲಿ ಹಣ ವಸೂಲಿಗೆ ಏಜೆಂಟ್ ಗೆ ಒತ್ತಡ ಇದೆ ಅಂತ ಆರೋಪ ಮಾಡಿದ್ದಾನೆ. ಈ ಬಗ್ಗೆ ಎಫ್ ಐ ಆರ್ ಕೂಡ ಆಗಿದೆ. ಕಲಬುರ್ಗಿಯಲ್ಲಿ ಒಬ್ಬ ಪೊಲಿಸ್ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಷ್ಟು ಬೇಗ ಹದಗೆಟ್ಟಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಅಂತ ತೋರಿಸಬೇಕು ಅಂದರೆ ಸರ್ಕಾರ ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿಬೇಕು. ಇಲ್ಲದಿದ್ದರೆ ಸಮಾಜ ಘಾತುಕ ಶಕ್ತಿಗಳು ತಾವು ಏನು ಮಾಡಿದರೂ ರಕ್ಷಣೆಗೆ ಇದ್ದಾರೆ ಎಂದು ಭಯವಿಲ್ಲದೆ ಓಡಾಡುತ್ತಾರೆ. ಜೈನ ಮುನಿಗಳ ಸಾವಿಗೆ ನ್ಯಾಯ ಕೊಡಬೇಕಾದರೆ, ಈ ವಿಚಾರದಲ್ಲಿ ಆ ಕಡೆ ಈಕಡೆ ಅನ್ನದೆ ಸರ್ಕಾರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದೆ ಅಂತ ತೋರಿಸಬೇಕಾದರೆ ಸಿಬಿಐ ತನಿಖೆಗೆ ಒಪ್ಪಿಸಬೇಕು.ಇಲ್ಲದಿದ್ದರೆ ರಾಜ್ಯದ ಜನತೆ ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ