
ಪ್ರಗತಿವಾಹಿನಿ ಸುದ್ದಿ: ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಎಲ್‌ಒಸಿ ಬಳಿ ಅನುಮಾನಾಸ್ಪದ ಚಲನವಲನಗಳನ್ನು ಸೇನೆ ಗಮನಿಸಿದ್ದು ಸ್ಥಳೀಯ ಪೊಲೀಸರೊಂದಿಗೆ ಸೇರಿ ಕುಪ್ವಾರಾ ಜಿಲ್ಲೆಯ ಮಚ್ಚಿಲ್ ಸೆಕ್ಟರ್‌ನ ಬಳಿ ಶೋಧ ಕಾರ್ಯ ನಡೆಸಿದೆ. ಈ ವೇಳೆ ಇಬ್ಬರು ಭಯೋತ್ಪಾದಕರು ಎಲ್‌ಪಿಸಿ ದಾಟಿ ಭಾರತದ ಪ್ರದೇಶಕ್ಕೆ ನುಸುಳುತ್ತಿರುವುದು ಪತ್ತೆಯಾಗಿದೆ.
ಕೂಡಲೇ ಎಚ್ಚೆತ್ತ ಸೇನೆಯು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಯೋತ್ಪಾದಕರು ಕೂಡ ಪ್ರತಿದಾಳಿ ನಡೆಸಿದ್ದು ತೀವ್ರ ಗುಂಡಿನ ಚಕಮಕಿ ನಡೆದು ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಸದ್ಯ ಸುತ್ತಾ ಮುತ್ತಾ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ಒಳನುಸುಳುವಿಕೆ ಪ್ರಯತ್ನವು ಪಾಕಿಸ್ತಾನದ ನಿರಂತರ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚೋದಿಸುವ ಪ್ರಯತ್ನಗಳ ಭಾಗವಾಗಿರಬಹುದು ಎಂದು ಸೇನಾ ಅಧಿಕಾರಿಗಳು ಆರೋಪಿಸಿದ್ದಾರೆ.