*ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಜನಾರ್ಧನ ರೆಡ್ಡಿ*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಬೆನ್ನಲ್ಲೇ ಶಾಸಕ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ರೀಲ್ಸ್ ಹಾಗೂ ಫೋಟೋ ಶೂಟ್ ಗೆ ಮಾಡೆಲ್ ಹೌಸ್ ಗೆ ಹೋಗಿದ್ದ ಕೆಲ ಯುವಕರ ಗುಂಪಿನಲ್ಲಿದ್ದ ಓರ್ವ ಅಪ್ರಾಪ್ತನಿಂದ ಅಚಾನಕ್ ಆಗಿ ಬೆಂಕಿ ತಗುಲಿದೆ. ಪ್ರಕರಣದಲ್ಲಿ ಆರು ಅಪ್ರಾಪ್ತರು ಸೇರಿ ಎಂಟು ಜನರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರಲ್ಲಿ ಯಾರಿಗೂ ರಾಜಕೀಯ ನಂಟು ಇಲ್ಲ. ಮೇಲ್ನೋಟಕ್ಕೆ ಇದೊಂದು ಆಕಸ್ಮಿಕ ಬೆಂಕಿ ಅವಘಡ ಎಂದು ಹೇಳಿಕೆ ನೀಡಿದ್ದ ಎಸ್ ಪಿ ಸುಮನ್ ಪನ್ನೇಕರ್ ಹೇಳಿಕೆಗೆ ಶಾಸಕ ಜನಾರ್ಧನ ರೆಡ್ಡಿ ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ಧನರೆಡ್ಡಿ, ಎಸ್ ಪಿ ಹೇಳಿಕೆ ಸುಳ್ಳು. ಫೋಟೋ ಶೂಟ್, ರೀಲ್ಸ್ ಗಾಗಿ ಯಾರಾದರೂ ಮನೆಗೆ ಬೆಂಕಿ ಹಚ್ಚಿ ವಿಡಿಯೋ ಮಾಡುತ್ತಾರಾ? ಎಸ್ ಪಿ ಅವರ ಬಗ್ಗೆ ಬಹಳ ಗೌರವವಿದೆ. ಆದರೆ ಈ ಘಟನೆಯನ್ನು ಇಷ್ಟು ಸಾಮಾನ್ಯ ಸಂಗತಿಯಂತೆ ನೋಡಬಾರದು ಎಂದಿದ್ದಾರೆ.
ಬಳ್ಳಾರಿಯಲ್ಲಿ ದೌಲ ಎಂಬ ಡ್ರಗ್ ಪೆಡ್ಲರ್ ಇದ್ದಾನೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ದೌಲನಿಗೆ ಗಾಂಜಾ ಮಾರಾಟದ ಗುತ್ತಿಗೆ ನೀಡಿದ್ದಾರೆ. ಈ ಮೂಲಕ ಭರತ್ ರೆಡ್ಡಿ ಡ್ರಗ್ಸ್ ಪೆಡ್ಲರ್ ಗೆ ರಕ್ಷಣೆ ನೀಡಿದ್ದಾರೆ. ಡಿಪಾರ್ಟ್ ಮೆಂಟ್ ಗಳು ಒಂದಾಗಿ ದೌಲನಿಂದ ಗಾಂಜಾ ಮಾರಾಟ ಮಾಡಿಸುತ್ತಿದೆ. ಇದರಲ್ಲಿ ಶಾಸಕ ಭರತ್ ರೆಡ್ಡಿಗೆ ಪಾಲಿದೆ ಎಂದು ಆರೋಪಿಸಿದ್ದಾರೆ.
ಸಣ್ಣ ವಯಸ್ಸಿನಲ್ಲಿ ಭಗವಂತ ಎಂಎಲ್ ಎ ಆಗುವ ಅವಕಾಶ ನೀಡಿದ್ದಾನೆ. ಎಲ್ಲಾ ಒಳ್ಳೆಯದು ಆಗುತ್ತೆ ಎಂಬ ಟೈಮ್ ನಲ್ಲಿ ಈ ರೀತಿ ಮಾಡುತ್ತಿದ್ದಾರೆ. ತಂದೆಯ ಗುಣ ಮಕ್ಕಳಿಗೂ ಬರುತ್ತದೆ ಎಂಬ ಮಾತಿದೆ. ಭರತ್ ರೆಡ್ಡಿ ತಂದೆ ನಕ್ಸಲರಿಗೆ ಗನ್ ಪೂರೈಕೆ ಮಾಡುತ್ತಿದ್ದರು. ನಕ್ಸಲರ ಜೊತೆ ಸಂಪರ್ಕ ಹೊಂದಿದ್ದರು. ತಂದೆಯ ಗುಣ ಮಗನಿಗೂ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


