ಪ್ರಗತಿವಾಹಿನಿ ಸುದ್ದಿ; ಟೊಕಿಯೋ: ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಪಶ್ಚಿಮ ಜಪಾನ್ ನ ನಾರಾ ನಗರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಸ್ಥಳೀಯ ಕಾಲಮಾನ 11:30ರ ಸುಮಾರಿಗೆ ಶಿಂಜೊ ಅಬೆ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ.
ಶಿಂಜೊ ಅಬೆ ಅವರ ಎದೆಯ ಭಾಗಕ್ಕೆ ಗುಂಡೇಟು ತಗುಲಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶಿಂಜೊ ಅಬೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬೆ ಅವರ ಮೇಲೆ ಎರಡು ಸುತ್ತು ಗುಂಡಿನ ದಾಳಿ ನಡೆದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಶಂಕಿತ ಆರೋಪಿಯನ್ನು ಬಂಧಿಸಲಾಗಿದ್ದು, ತೆತ್ಸುಯಾ ಯಮಗಾವಿ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಕಂಟ್ರಿ ಪಿಸ್ತೂಲ್ ನಿಂದ ಆರೋಪಿ ಗುಂಡು ಹಾರಿಸಿದ್ದಾನೆ. ಅಲ್ಲದೇ ಆತ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
ಬೈಕ್ ಗೆ ಲಾರಿ ಡಿಕ್ಕಿ; ಅಮ್ಮ-ಮಗ ಸ್ಥಳದಲ್ಲೇ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ