ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಗೋಕಾಕದ ಪ್ರತಿಷ್ಠಿತ ಜಾರಕಿಹೊಳಿ ಕುಟುಂಬದಿಂದ ಮತ್ತೊಂದು ನ್ಯೂಸ್ ಚಾನೆಲ್ ಆರಂಭವಾಗುತ್ತಿದೆ. ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ಹೊಸ ನ್ಯೂಸ್ ಚಾನೆಲ್ ಆರಂಭಿಸಲಿದ್ದಾರೆ. ಚಾನೆಲ್ ಹೆಸರು ‘ಲಕ್ಷ್ಮಿ 24X7’.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಪೋಸ್ಟರ್ ಗಳು ಹರಿದಾಡುತ್ತಿದೆ. ಶೀಘ್ರದಲ್ಲೇ ಹೊಸ ನ್ಯೂಸ್ ಚಾನೆಲ್ ಆರಂಭಿಸುವುದಾಗಿ ತಿಳಿಸಲಾಗಿದೆ. ಪೋಸ್ಟರ್ ನಲ್ಲಿ ಪ್ರಸ್ತುತ ರಾಜಕೀಯ ವೈರಿಗಳಾದ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಸೇರಿದಂತೆ ಎಲ್ಲ ಐವರು ಸಹೋದರರ ಮತ್ತು ಎಲ್ಲರ ಮಕ್ಕಳ (ಐವರು) ಫೋಟೋ ಹಾಕಲಾಗಿದೆ.
ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ ಫೋಟೋಗಳೂ ಇವೆ. ಗೋಕಾಕ ಉಪಚುನಾವಣೆ ಕಣ ರಂಗೇರಿದ್ದು, ಜಾರಕಿಹೊಳಿ ಕುಟುಂಬ ಇಬ್ಬಾಗವಾಗಿ, ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದರೆ ಈ ಪೊಸ್ಟರ್ ಇಡೀ ಕುಟುಂಬ ಒಂದು ಎನ್ನುವಂತಿದೆ.
ದಿ.ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮತ್ತು ಮಕ್ಕಳ ಆಶಿರ್ವಾದದೊಂದಿಗೆ ಎಂದು ದಿ.ಲಕ್ಷ್ಮಣ ರಾವ್ ಜಾರಕಿಹೊಳಿ ಮತ್ತು ಭೀಮವ್ವ ಜಾರಕಿಹೊಳಿ ಫೋಟೋಗಳನ್ನೂ ಹಾಕಲಾಗಿದೆ.
ಎರಡನೇ ಚಾನೆಲ್
ಈ ಹಿಂದೆ ಸತೀಶ್ ಜಾರಕಿಹೊಳಿ ಸಮಯ ಚಾನೆಲ್ ಆರಂಭಿಸಿದ್ದರು. ಆದರೆ ಅದು ಯಶಸ್ವಿಯಾಗದೆ ಮಾರಾಟ ಮಾಡಬೇಕಾಯಿತು. ಅವರು ಪತ್ರಿಕೆಯನ್ನೂ ಆರಂಭಿಸುವುದಾಗಿ ಸುಮಾರು 10-15 ವರ್ಷದಿಂದಲೂ ಹೇಳುತ್ತಲೇ ಬಂದಿದ್ದಾರೆ. ಆದರೆ ಇನ್ನೂ ಸಾಧ್ಯವಾಗಲಿಲ್ಲ.
ಗೋಕಾಕ ಟೈಮ್ಸ್ (ಈಗಿನ ಕರ್ನಾಟಕ ಟೈಮ್ಸ್) ಜಾರಕಿಹೊಳಿ ಕುಟುಂಬದಿಂದಲೇ ನಡೆಯುತ್ತಿದೆ. ಹಾಗಾಗಿ ಜಾರಕಿಹೊಳಿ ಕುಟುಂಬಕ್ಕೆ ಮಾಧ್ಯಮ ಹೊಸತಲ್ಲದಿದ್ದರೂ ಅದರಲ್ಲಿ ್ವರು ಯಶಸ್ವಿಯಾಗಿದ್ದು ಅಷ್ಟಕ್ಕಷ್ಟೆ.
ಲಕ್ಷ್ಮಿ ಹೆಸರೇಕೆ?
ಜಾರಕಿಹೊಳಿ ಕುಟುಂಬ ಮತ್ತು ಲಕ್ಷ್ಮಿ ಹೆಬ್ಬಾಳಕರ್ ನಡುವೆ ಭಾರಿ ರಾಜಕೀಯ ವೈರತ್ವ ಕಾಣಿಸಿಕೊಂಡು, ರಾಜ್ಯ ಸರಕಾರದ ಪತನಕ್ಕೂ ಇದೇ ಕಾರಣ ಎನ್ನುವ ಆರೋಪಗಳೂ ಕೇಳಿ ಬಂದಿದ್ದವು.
ಈಗಿನ ಚುನಾವಣೆ ಕಣದಲ್ಲೂ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿದೆ. ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಪ್ರಯತ್ನ ನಡೆದಿದ್ದಲ್ಲದೆ, ಅವರಿಗೆ ಮಂತ್ರಿಸ್ಥಾನ ತಪ್ಪಿಸಿದ್ದಾಗಿಯೂ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇಷ್ಟೊಂದು ಬದ್ದ ವೈರಿಯಾಗಿರುವ ಲಕ್ಷ್ಮಿ ಹೆಸರಲ್ಲಿ ಚಾನೆಲ್ ಏಕೆ ಎನ್ನುವ ಗೊಂದಲ ಬೇಡ.
ಈಗ ಅವರು ಹೆಸರು ಇಡಲು ಮುಂದಾಗಿರುವ ‘ಲಕ್ಷ್ಮಿ’ ಜಾರಕಿಹೊಳಿ ಕುಟುಂಬದ ಮನೆ ದೇವರು. ಅವರು ಯಾವುದೇ ಕೆಲಸ ಆರಂಭಿಸುವಾಗಲೂ ಗೋಕಾಕದ ಲಕ್ಷ್ಮಿ ಗುಡಿಯಿಂದಲೇ ಆರಂಭಿಸುವುದು. ಅವರ ಅನೇಕ ಉದ್ಯಮಗಳೂ ಲಕ್ಷ್ಮಿ ಹೆಸರಿನಲ್ಲೇ ಇವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ