ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರು ಬಸವರಾಜ ಪಾಟೀಲ, ಯತ್ನಾಳ ಅವರ ಬಗ್ಗೆ ನೀಡಿದ ಹೇಳಿಕೆಯಿಂದ ಮನಸಿಗೆ ನೋವಾಗಿದೆ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅರುಣ ಸಿಂಗ್ ಅವರು ಭಾನುವಾರ ಬೆಳಗಾವಿಯಲ್ಲಿ ಹಾಗೂ ಸೋಮವಾರ ಚಿಕ್ಕೋಡಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಿರಿಯ ನಾಯಕರಾದ ಶಾಸಕ ಬಸವರಾಜ ಪಾಟೀಲ ಯತ್ನಾಳರ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ. ಯತ್ನಾಳ ಗೌಡರು ಬಿಜೆಪಿ ಪಕ್ಷಕ್ಕಾಗಿ ದುಡಿಯುತ್ತ ಬಂದವರು. ಆದರೆ ಅರುಣ ಸಿಂಗ್ ಅವರು ಯತ್ನಾಳ ಯಾರು ? ಎಂದು ಪ್ರಶ್ನಿಸಿದ್ದಲ್ಲದೇ ಯತ್ನಾಳ ನಾಯಕರೇ ಅಲ್ಲ ಎಂದು ಹೇಳಿಕೆ ನೀಡಿದ್ದು ಸರಿಯಲ್ಲ, ಅರುಣ್ ಸಿಂಗ್ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಯತ್ನಾಳ ಅವರು ಸಚಿವ ಸ್ಥಾನ ಸಿಗದಿದ್ದಕ್ಕೆ ಪಕ್ಷದ ವಿರುದ್ಧ ಮಾತಾಡುತ್ತಿದ್ದಾರೆಯೇ ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಯತ್ನಾಳ ಅವರಿಗೆ ಸಚಿವ ಸ್ಥಾನದ ಆಸೆ ಇಲ್ಲ ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನದ ಬಗ್ಗೆ ನಮ್ಮ ಎದುರೇ ಒಮ್ಮೆ ಪ್ರಸ್ತಾಪಿಸಿದ್ದರು. ಆದರೆ ಯತ್ನಾಳ ಅವರು, ಸಚಿವ ಸ್ಥಾನ ಬೇಡ, ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕೊಡಿ ಎಂದು ಒತ್ತಾಯಿಸಿದ್ದರು ಎಂದರು.
*ಬೃಹತ್ ಸಮಾವೇಶ*
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಸು ತೀರ್ಮಾನಿಸಲಾಗಿರುವ ಅಂತಿಮ ಹೋರಾಟದ ಪೂರ್ವಬಾವಿಯಾಗಿ ಹುಕ್ಕೇರಿಯಲ್ಲಿ ಅಕ್ಟೋಬರ್ 21 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಪಂಚಮಸಾಲಿ ಸಮುದಾಯದ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬಸವರಾಜ ಪಾಟೀಲ ಯತ್ನಾಳ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿನಯ ಕುಲಕರ್ಣಿ, ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು.
*ನಿರಾಣಿ ತಟಸ್ಥರಾಗಿದ್ದು ನೋವು ತಂದಿದೆ*
ಪಂಚಮಸಾಲಿ 2 ಎ ಮೀಸಲಾತಿ ಹೋರಾಟಕ್ಕೆ ಸಚಿವರಾದ ಸಿಸಿ ಪಾಟೀಲ, ಶಂಕರ ಪಾಟೀಲ ಅವರು ಸಹಕಾರ ನೀಡುತ್ತಿದ್ದಾರೆ. ಆದರೆ ಸಚಿವ ಮುರುಗೇಶ ನಿರಾಣಿ ಅವರು ತಟಸ್ಥರಾಗಿದ್ದು ನೋವು ತಂದಿದೆ ಎಂದರು.
ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದ ಮೂವರು ಸಚಿವರು, 20 ಶಾಸಕರಿದ್ದಾರೆ. ಬಸವರಾಜ ಪಾಟೀಲ ಯತ್ನಾಳ ಅವರು ಸಮಾಜಕ್ಕೆ 2 ಎ ಮೀಸಲಾತಿ ಕೊಡಿಸಲು ಹೋರಾಟದ ಮುಂಚೂಣಿ ವಹಿಸಿದ್ದಾರೆ. ಎಲ್ಲ ಶಾಸಕರೂ ಅವರಿಗೆ ಹೋರಾಟದಲ್ಲಿ ಬೆಂಬಲ ನೀಡಬೇಕು , ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಸಮಾಜದ ಅಸಮಾಧಾನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಆರ್. ಕೆ. ಪಾಟೀಲ, ದಿನೇಶ ಪಾಟೀಲ, ರುದ್ರಣ್ಣ ಚಂದರಗಿ, ಗುಂಡು ಪಾಟೀಲ, ಬಿ. ಆರ್. ಪಾಟೀಲ ಮೊದಲಾದವರು ಇದ್ದರು.
https://pragati.taskdun.com/latest/panchamasali2a-reservationcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ