Kannada NewsKarnataka NewsLatest

*ಜಯರಾಮ ಹೆಗಡೆಗೆ ಮನೆಯಂಗಳದಲ್ಲಿ ಕೆಯುಡಬ್ಲೂಜೆ ಗೌರವ*

ಐಷಾರಾಮಿ ಜೀವನ ನಡೆಸಲು ಪತ್ರಿಕೋದ್ಯಮಕ್ಕೆ ಬರಬಾರದು: ಹೆಗಡೆ

ಪ್ರಗತಿವಾಹಿನಿ ಸುದ್ದಿ: ಐಷಾರಾಮಿ ಜೀವನ ಮಾಡಬೇಕು ಎನ್ನುವವರು ಪತ್ರಿಕೋದ್ಯಮಕ್ಕೆ ಬರಬಾರದು ಎಂದು ಹಿರಿಯ ಪತ್ರಕರ್ತರಾದ ಶಿರಸಿ ಜಯರಾಮ ಹೆಗಡೆ ತಿಳಿಸಿದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮನೆಯಂಗಳದಲ್ಲಿ ನೀಡುವ ಕೆಯುಡಬ್ಲೂಜೆ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಇಳಿವಯಸ್ಸಿನಲ್ಲಿರುವ ನನ್ನ ಮನೆಗೆ ಬಂದು ಕಾರ್ಯನಿರತ ಪತ್ರಕರ್ತರ ಸಂಘವು ಗೌರವ ನೀಡಿರುವುದು ಹೃದಯ ತುಂಬಿ ಬಂದಿದೆ ಎಂದರು.
ಪತ್ರಕರ್ತರ ಬಗ್ಗೆ ಜನ ಸಾಮಾನ್ಯರ ನಿರೀಕ್ಷೆಗಳು ಬಹಳ ಇದೆ. ಆ ನಿಟ್ಟಿನಲ್ಲಿ ಪತ್ರಕರ್ತರು ಹೆಜ್ಜೆ ಇಡಬೇಕು. ಸಾಮಾಜಿಕ ಜವಬ್ದಾರಿಯನ್ನು ಎಂದೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.


ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ಎಂಥದ್ದೆ ಕಾಲಘಟ್ಟದಲ್ಲಿಯೂ ಪತ್ರಿಕೋದ್ಯಮ ತನ್ನ ಮೊನಚು ಕಳೆದುಕೊಂಡಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿಯೂ ಮುದ್ರಣ ಮಾಧ್ಯಮ ಪತ್ರಿಕೋದ್ಯಮ ತನ್ನ ಘನತೆ ಉಳಿಸಿಕೊಂಡಿದೆ. ಇದು ನೂರಾರು ವರ್ಷ ಹೀಗೆಯೇ ಇರಲಿದೆ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.

Home add -Advt


ಹಾಸನದಲ್ಲಿ ಪತ್ರಿಕೋದ್ಯಮ ಪ್ರಾರಂಭ ಮಾಡಿದ ದಿನದಿಂದ ಈ ತನಕ ನಾನು ವೃತ್ತಿ ಬದ್ದವಾಗಿ ಮಾಡಿಕೊಂಡು ಬಂದಿರುವ ಕೆಲಸ ಮತ್ತು ಸೇವೆ ನನಗೆ ತೃಪ್ತಿ ತಂದಿದೆ. ಶಿರಸಿಯಲ್ಲಿ ಜನ ಮಾಧ್ಯಮ ಪತ್ರಿಕೆಯನ್ನು ಪ್ರಾರಂಭ ಮಾಡಿದ್ದು ಆ ಮೂಲಕ ಈ ಭಾಗದ ಜನರ ಜೀವನಾಡಿಯಾಗಿದ್ದು ಖುಷಿ ತಂದಿದ ಎಂದು ಹೇಳಿದರು.


25 ವರ್ಷಗಳ ಹಿಂದಿ ಬೇಡ್ತಿ ಮತ್ತು ವರದಾ ನದಿ ಜೋಡಣೆಯನ್ನು ವಿರೋಧಿಸಿ ಜನಮಾಧ್ಯಮ ಪತ್ರಿಕೆಯಲ್ಲಿ ನಾನು ಸಂಪಾದಕೀಯ ಬರೆದಿದ್ದು, ಈಗಲೂ ಪ್ರಸ್ತುತವಾಗಿದೆ. ನದಿ ಜೋಡಣೆ ವಿರೋಧಿಸಿ ಚಳವಳಿ ನಡೆಯುತ್ತಿದೆ. ಈ ಬಗ್ಗೆ ಪತ್ರಿಕೆಯು ತನ್ನ ಜವಬ್ದಾರಿಯನ್ನು ನಿರ್ವಹಣೆ ಮಾಡಿದ್ದರ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.


ಯುವ ಜನಾಂಗ ಪತ್ರಿಕೋದ್ಯಮದ ಬಗ್ಗೆ ಬದ್ದತೆ ಇಟ್ಟುಕೊಂಡು ಕೆಲಸ ಮಾಡಲು ಮುಂದೆ ಬರಬೇಕು. ಆಗ ಮಾತ್ರವೇ ಬದಲಾವಣೆ ಸಾಧ್ಯ ಎಂದು ಹೇಳಿದರು.

ಕಾಯಕ ಜೀವಿ ಜಯರಾಮ ಹೆಗಡೆ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಎಂಬತ್ತರ ದಶಕದಲ್ಲಿ ಹಾಸನದಲ್ಲಿ ಜನತಾ ಮಾಧ್ಯಮ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಜಯರಾಮ ಹೆಗಡೆ ಅವರು, ಶಿರಸಿಯಲ್ಲಿ ತಮ್ಮದೇ ಸಂಪಾದಕತ್ವದಲ್ಲಿ ಜನಮಾಧ್ಯಮ ಪತ್ರಿಕೆಯ ಮೂಲಕ ನಡೆಸಿದ ಪತ್ರಿಕೋದ್ಯಮ ಜನಪರ ಪತ್ರಿಕೋದ್ಯಮಕ್ಕೆ ಕನ್ನಡಿಯಾಗಿದೆ ಎಂದರು.


ಹಿರಿಯ ಪತ್ರಕರ್ತರ ಸೇವೆಯನ್ನು ಗುರುತಿಸಿ ಅವರ ಮನೆಯಂಗಳಕ್ಕೆ ತೆರಳಿ ಅವರ ಕುಟುಂಬದ ಸಮ್ಮುಖದಲ್ಲಿ ಗೌರವಿಸುವ ಕೆಲಸವನ್ನು ಕೆಯುಡಬ್ಲೂಜೆ ನಿರಂತರವಾಗಿ ಮಾಡಿಕೊಂಡು ಬಂದಿದೆ. ಇಂದು ಶಿರಸಿಗೆ ಬಂದು ಜಯರಾಮ ಹೆಗಡೆ ಅವರ ಮನೆಯಂಗಳದಲ್ಲಿ ಗೌರವಿಸುತ್ತಿರುವುದು ರಾಜ್ಯ ಸಂಘಕ್ಕೂ ಅಭಿಮಾನದ ಸಂಗತಿಯಾಗಿದೆ ಎಂದರು.


84 ವರ್ಷದ ತುಂಬು ಜೀವನ ಸಾಗಿಸಿರುವ ಜಯರಾಮ ಹೆಗಡೆ ಅವರು ಪತ್ರಕರ್ತರಾಗಿ, ಸಾಹಿತಿಗಳಾಗಿ ಮತ್ತು ಸಂಘಟಕರಾಗಿ ಮಾಡಿರುವ ಸೇವೆ ಅನನ್ಯ. ಅವರು ಶತಾಯುಷಿಗಳಾಗಿ ಬಾಳಲಿ ಎಂದು ತಗಡೂರು ಅವರು ಶುಭ ಹಾರೈಸಿದರು.


ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ, ಜಯರಾಮ ಹೆಗಡೆ ಅವರ ಪುತ್ರಿ ಸಿಂಧು, ಅಳಿಯ ಚಂದ್ರಶೇಖರ್ ಹಾಜರಿದ್ದರು.

Related Articles

Back to top button