Latest

ಕಾಂಗ್ರೆಸ್ ಮುಖಂಡರನ್ನು ತೀಕ್ಷ್ಣವಾಗಿ ತಿವಿದ ದೇವೇಗೌಡ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಜೊತೆ ಮೈತ್ರಿ ಕಾರಣ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ತೀವ್ರ ಕಿಡಿಕಾರಿದ್ದು, ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

37 ಸೀಟು ಬಂದ ನಾವು ಮುಖ್ಯಮಂತ್ರಿಯನ್ನು ಬಯಸುವುದು ಸರಿಯಲ್ಲ. ನಿಮ್ಮವರೇ ಮುಖ್ಯಮಂತ್ರಿಯಾಗಲಿ, ನಾವು ಬೆಂಬಲ ನೀಡುತ್ತೇವೆ ಎಂದು  ಗುಲಾಂನಬಿ ಆಜಾದ್ ಅವರಿಗೆ ಹೇಳಿದ್ದೆ. ಮಲ್ಲಿಕಾರ್ಜುನ ಖರ್ಗೆ ಅಥವಾ ಕೆ ಎಚ್ ಮುನಿಯಪ್ಪ ಸಿಎಂ ಆಗಲಿ ಎಂದು ನಾನೇ ಹೇಳಿದ್ದೆ. ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದವರು ಅವರೇ ಎಂದು ದೇವೇಗೌಡ ಹೇಳಿದರು.

ಸೋಲು ಗೆಲುವು ಚುನಾವಣೆಯಲ್ಲಿ ಸಹಜ. ನಾನೆಂದೂ ನನ್ನ ಸೋಲನ್ನು ಕಾಂಗ್ರೆಸ್ ಹಣೆಗೆ ಕಟ್ಟಿಲ್ಲ. ಲೋಕಸಭಾ ಚುನಾವಣೆಯಲ್ಲಿನ ಸೋಲಿನ ನಂತರ ಮೈತ್ರಿಪಕ್ಷದ ಮುಖಂಡರ ಹೇಳಿಕೆ ಮನಸ್ಸಿಗೆ ನೋವು ತಂದಿದೆ. ಜೆಡಿಎಸ್ ನವರು ಬೆನ್ನಿಗೆ ಚೂರಿ ಹಾಕಿದರು ಎನ್ನುವ ಕಾಂಗ್ರೆಸ್ ಮುಖಂಡರ ಹೇಳಿಕೆಯಿಂದ ಪ್ರತೀ ಕ್ಷಣವೂ ನೋವು ಅನುಭವಿಸುತ್ತಿದ್ದೇನೆ ಎಂದು ದೇವೇಗೌಡ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಸೋಲಿಗೆ ಜೆಡಿಎಸ್ ಕಾರಣ ಎಂದು ಹೇಳುತ್ತಾರೆ. ಕಲಬುರಗಿಯಲ್ಲಿ ಒಕ್ಕಲಿಗರ ಸಂಖ್ಯೆ ಎಷ್ಟು? ನಾವು ಹೇಗೆ ಸೋಲಿಸಲು ಸಾಧ್ಯ? ತುಮಕೂರಿನಲ್ಲಿ ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದಾಗ, ನನ್ನ ಸೋಲು ಒಕ್ಕಲಿಗರಿಂದಾಯಿತು ಎಂದಾದರೆ ಅದಕ್ಕೆ ಸಂತೋಷ ಪಡುತ್ತೇನೆ ಎಂದು  ನುಡಿದರು.

ಯಾರಿಂದ ಯಾರಿಗೆ ಸೋಲಾಯಿತು ಎನ್ನುವುದನ್ನು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನನ್ನ ಪಕ್ಷದ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಲಿಲ್ಲವೇ?  ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದೆ, ಹಾಗಾಗಿ ಹೇಳಿಕೆ ನೀಡುವಾಗ ಎಚ್ಚರದಿಂದ ಮಾತನಾಡಬೇಕಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button