ಪ್ರಗತಿವಾಹಿನಿ ಸುದ್ದಿ:
ರಾಯಚೂರು: ಶಾಸಕಿಯ ಪುತ್ರ ಹಾಗೂ ಪಿಎ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.
ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್, ಪಿಎ ಇಲಿಯಾಸ್ ಸೇರಿದಂತೆ 8 ಜನರು ದೇವದುರ್ಗ ಪೊಲೀಸ್ ಠಾಣೆಯ ಕರ್ತವ್ಯ ನಿರತ ಕಾನ್ಸ್ ಟೇಬಲ್ ಹನುಮಂತರಾಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆ ಬಳಿಕ ರಾಜಕೀಯ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಕಾನ್ಸ್ ಟೇಬಲ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾನ್ಸ್ ಟೇಬಲ್ ಹನುಮಂತರಾಯ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನ್ನು ತಡೆದಿದ್ದರು. ಈ ವೇಳೆ ಶಾಸಕಿ ಪುತ್ರ ಸಂತೋಷ್ ಕರೆ ಮಾಡಿ ಟ್ರ್ಯಾಕ್ಟರ್ ಬಿಟ್ಟು ಕಳಿಸುವಂತೆ ಹೇಳಿದ್ದಾರೆ. ಒತ್ತಡಕ್ಕೆ ಮಣಿಯದ ಕಾನ್ಸ್ಟೇಬಲ್ ಟ್ರ್ಯಾಕ್ಟರ್ ಪೊಲೀಸ್ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಶಾಸಕಿ ಪುತ್ರ ಸಂತೋಷ್ ದೇವದುರ್ಗ ಪ್ರವಾಸಿ ಮಂದಿರಕ್ಕೆ ಕಾನ್ಸ್ಟೇಬಲ್ ಹನುಮಂತರಾಯಪ್ಪನನ್ನು ಕರೆಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಬೆಳವಣಿಗೆ ಬೆನ್ನಲ್ಲೇ ಶಾಸಕಿ ಕರೆಮ್ಮ ನಾಯಕ್ ದೇವದುರ್ಗ ಪೊಲೀಸ್ ಠಾಣೆಯ ಎದುರು ತಮ್ಮ ಬೆಂಬಲಿಗರ ಜೊತೆಗೂಡಿ ತಡ ರಾತ್ರಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ