Kannada NewsLatestPolitics

*ಲೋಕಸಭೆ ಚುನಾವಣೆ: ಸರಣಿ ಸಭೆಗಳನ್ನು ಆರಂಭಿಸಿದ ನಿಖಿಲ್ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್‌ ಬಿರುಸಿನ ಸಿದ್ಧತೆಗಳನ್ನು ಆರಂಭಿದ್ದು, ಅದಕ್ಕಾಗಿ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಸರಣಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅವರು ಇಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಎಲ್ಲಾ ತಾಲೂಕುಗಳ ಮುಖಂಡರ ಪ್ರತ್ಯೇಕ ಸಭೆಗಳನ್ನು ನಡೆಸಿ ಮಹತ್ವದ ಸಮಾಲೋಚನೆ ನಡೆಸಿದರು.

ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ಸಮಾಲೋಚನಾ ಸಭೆಗಳನ್ನು ನಡೆಸುತ್ತಿದ್ದು; ಪಕ್ಷವನ್ನು ಜಿಲ್ಲಾ, ತಾಲೂಕು ಹಾಗೂ ಅದಕ್ಕಿಂತ ತಳಮಟ್ಟದಲ್ಲಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಯುವ ಜನತಾದಳ ಮುಖಂಡರಿಗೆ ಗುರಿ ನಿಗದಿ ಮಾಡುತ್ತಿದ್ದಾರೆ.

ಸದ್ಯ ಜೆಡಿಎಸ್‌ ಪಕ್ಷವು ಎನ್‌ʼಡಿಎ ಒಕ್ಕೂಟವನ್ನು ಸೇರಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿ ಜತೆ ಸೇರಿ ರಾಜ್ಯದಲ್ಲಿ ಕೆಲಸ ಮಾಡಬೇಕಿದೆ. ಅದರಲ್ಲೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟವು ರಾಜ್ಯದ ಎಲ್ಲಾ 28 ಲೋಕಸಭೆ ಕ್ಷತ್ರಗಳನ್ನು ಗೆಲ್ಲುವ ದಿಸೆಯಲ್ಲಿ ನಿಖಿಲ್‌ ಅವರು ಮುಖಂಡರ ಜತೆ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸ್ಥಾನ ಹಂಚಿಕೆ ಕುರಿತ ಚರ್ಚೆಗಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನವದೆಹಲಿಗೆ ಭೇಟಿ ನೀಡುವ ಮೊದಲು ನಿಖಿಲ್‌ ಅವರು; ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳ ಜೆಡಿಎಸ್ ನಾಯಕರ ಜತೆ ಎರಡು ಸಭೆಗಳನ್ನು ನಡೆಸಿದ್ದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಸಭೆ:

ನಿಖಿಲ್‌ ಕುಮಾರಸ್ವಾಮಿ ಅವರು ಇಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಕ್ಷೇತ್ರದ ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ ತಾಲೂಕುಗಳ ಮುಖಂಡರ ಜತೆ ಸ್ಥಳೀಯ ಪರಿಸ್ಥಿತಿಯ ಮಾಹಿತಿ ಪಡೆದವು. ಮುಂಬರುವ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯು ಶತಾಯಗಾಯ ಗೆಲುವು ಸಾಧಿಸಲೇಬೇಕು ಎಂಬ ನಿಟ್ಟಿನಲ್ಲಿ ನಿಖಿಲ್‌ ಅವರು ಮುಖಂಡರಿಗೆ ಕೆಲ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದರು.

ಇದರ ಮುಂದುವರಿದ ಭಾಗವಾಗಿ ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಶಿವಮೊಗ್ಗ ಲೋಕಸಭೆ ಕ್ಷೇತ್ರಗಳ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಅವರು ಕ್ರಮೇಣ ಚರ್ಚೆ ನಡೆಸಲಿದ್ದಾರೆ. ಅಲ್ಲದೆ; ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶಗಳ ಪಕ್ಷದ ಆಯ್ದ ನಾಯಕರೊಂದಿಗೂ ಅವರು ಪ್ರತ್ಯೇಕ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ.

ಯಾಕೆ ಈ ಸಭೆಗಳು?:

ರಾಜ್ಯದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಎಲ್ಲಾ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಜೆಡಿಎಸ್‌ ಹೊಂದಿದ್ದು, ಈ ನಿಟ್ಟಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರು, ಆಯಾ ಕ್ಷೇತ್ರಗಳ ರಾಜಕೀಯ ವಿದ್ಯಮಾನಗಳ ಕುರಿತಾಗಿ ಪಕ್ಷದ ಪದಾಧಿಕಾರಿಗಳಿಂದ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ.

ಮಿಷನ್ 100% ಗುರಿ ಪೂರ್ಣಗೊಳಿಸಲು ಬಿಜೆಪಿಯೊಂದಿಗೆ ಜೆಡಿಎಸ್‌ ಕೂಡ ಸಮರ್ಥವಾಗಿ ಸಜ್ಜಾಗುತ್ತಿದೆಯಲ್ಲದೆ; ರಾಜ್ಯ ಮತ್ತು ದೆಹಲಿ ಬಿಜೆಪಿಯೊಂದಿಗೆ ಪರಸ್ಪರ ಹೊಂದಾಣಿಕೆ, ಸಮನ್ವಯತೆಯಿಂದ ಕೆಲಸ ಮಾಡಲು ಅವರು ಮುಖಂಡರನ್ನು ಅಣಿಗೊಳಿಸುತ್ತಿದ್ದಾರೆ. ಜತೆಗೆ, ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಂದಿರುವ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಎಲ್ಲಾ ಮುಖಂಡರು ಒಗ್ಗಟ್ಟಾಗಿ, ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ನಿಖಿಲ್‌ ಅವರು ಕಿವಿಮಾತು ಹೇಳಿದರು.

ಗೌಡರು, ಕುಮಾರಣ್ಣ ಗುರಿಗಾಗಿ ಕೆಲಸ ಮಾಡುತ್ತೇವೆ:

ʻʻರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಚಿಂತನ ಮಂಥನದ ಮೂಲಕ ರಾಜ್ಯದಲ್ಲಿನ ಪ್ರಮುಖ ವಿಷಯಗಳನ್ನು ಗುರುತಿಸಿ ಕೇಂದ್ರದ ನಾಯಕರುಗಳೊಡನೆ ಈ ಕುರಿತಾಗಿ ಚರ್ಚೆ ನಡೆಸಲಿದ್ದೇವೆ. ನಮ್ಮ ನಾಯಕರಾದ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಜನರ ಹಿತಾಸಕ್ತಿಯನ್ನು ಕಾಪಾಡಲು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ರಾಜ್ಯದ ಜನರ ಹಿತ ಕಾಯಲು ಸಿಗುವ ಯಾವುದೇ ಚಿಕ್ಕ ಅವಕಾಶವನ್ನು ನಾವು ಬಿಡುವುದಿಲ್ಲ, ಇದು ನಮ್ಮ ಪಕ್ಷದ ಸಂಕಲ್ಪ” ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದರು.

“ಕರ್ನಾಟಕದ ಜನರ ಪರವಾಗಿ ದನಿ ಎತ್ತುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್‌ ಸರಕಾರವೇ ಅಡ್ಡಿಯಾಗಿದೆ. ಪ್ರಾದೇಶಿಕ ಪಕ್ಷವಾಗಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವುದೂ ನಮ್ಮ ಕರ್ತವ್ಯ” ಎಂದು ಅವರು ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಸಭೆಯಲ್ಲಿ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಹಲವಾರು ಮುಖಂಡರು, ಪ್ರಮುಖರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button