*ಎನ್‌ವಿಡಿಯಾಗೆ ಮರಳಲು ಜೆನ್ಸೆನ್ ಹುವಾಂಗ್ ಸಿದ್ಧ*: *ವಾಪಸ್ ಕರೆಸಿಕೊಳ್ಳಲು ಕಂಪನಿ ಹಿಂದೇಟು*

ಪ್ರಗತಿವಾಹಿನಿ ಸುದ್ದಿ: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಎನ್‌ವಿಡಿಯಾದ ಮಾಜಿ ಸಿಇಒ ಜೆನ್ಸೆನ್ ಹುವಾಂಗ್ ಮತ್ತೆ ಕಂಪನಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಮ್ಮ ಖಾಸಗಿ ಜೀವನದಲ್ಲಿ ಗಂಭೀರ ತಪ್ಪುಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿರುವ ಅವರು, ಅದಕ್ಕೆ ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಆಡಳಿತ ಮಂಡಳಿಯ ಸ್ವತಂತ್ರ ತನಿಖೆಗೆ ಸಹಕರಿಸುವುದಾಗಿಯೂ ಹೇಳಿದ್ದಾರೆ. ಆದರೆ, ಸಿಇಒ ಸ್ಥಾನಕ್ಕೆ ಮರಳುವ ಅವರ ಆಸೆಗೆ ಆಡಳಿತ ಮಂಡಳಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ.
ಎನ್‌ವಿಡಿಯಾವನ್ನು ಸ್ಥಾಪಿಸಿ ಜಾಗತಿಕ ಮಟ್ಟದಲ್ಲಿ ಬೆಳೆಸುವಲ್ಲಿ ಜೆನ್ಸೆನ್ ಹುವಾಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಶಂಕಿತ ಚೀನೀ ಗೂಢಚಾರಿಣಿ ಸೇರಿದಂತೆ ಹಲವು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಸಿಇಒ ಸ್ಥಾನದಿಂದ ಹೊರಗುಳಿದಿದ್ದಾರೆ. ಈ ಬೆಳವಣಿಗೆಯಿಂದ ಕಂಪನಿಗೆ ಅವರ ಮರುಪ್ರವೇಶದ ಬಗ್ಗೆ ಚರ್ಚೆ ಆರಂಭವಾಗಿದೆ.
ಈ ನಡುವೆ ಜೆನ್ಸೆನ್ ಹುವಾಂಗ್ ತಮ್ಮ ಮನದ ಮಾತುಗಳನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವಾರದಿಂದ ಸ್ನೇಹಿತರು, ಉದ್ಯಮದ ಸಹೋದ್ಯೋಗಿಗಳು ಹಾಗೂ ಅಪರಿಚಿತರಿಂದಲೂ ಅಪಾರ ಪ್ರೀತಿ ಮತ್ತು ಬೆಂಬಲ ವ್ಯಕ್ತವಾಗಿದೆ. ತಮ್ಮ ಕುಟುಂಬಕ್ಕೆ ಧೈರ್ಯ ತುಂಬಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
53 ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದಿದ್ದು, ಅಲ್ಲಿನ ಪೌರತ್ವ ಪಡೆದದ್ದು ತಮ್ಮ ಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಒಂದು ಎಂದು ಹುವಾಂಗ್ ಹೇಳಿದ್ದಾರೆ. ಎನ್‌ವಿಡಿಯಾ ತಮ್ಮ ಜೀವಮಾನದ ಕೆಲಸವಾಗಿದ್ದು, ಸಹೋದ್ಯೋಗಿಗಳೊಂದಿಗೆ ಸೇರಿ ಕಂಪನಿಯನ್ನು ಈ ಮಟ್ಟಕ್ಕೆ ಬೆಳೆಸಿರುವುದು ಗೌರವದ ಸಂಗತಿ ಎಂದಿದ್ದಾರೆ. ಇಂತಹ ಕಂಪನಿ ಅಮೆರಿಕದಲ್ಲಷ್ಟೇ ಸಾಧ್ಯ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತಮ್ಮ ವೈಯಕ್ತಿಕ ಜೀವನದಲ್ಲಿ ಗಂಭೀರ ತಪ್ಪುಗಳನ್ನು ಮಾಡಿದ್ದೇನೆ. ಎನ್‌ವಿಡಿಯಾದಲ್ಲಿ ಎಲ್ಲರಿಂದ ನಿರೀಕ್ಷಿಸಲಾದ ಮಾನದಂಡಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಇದರಿಂದ ಆಡಳಿತ ಮಂಡಳಿಗೆ ಸಮಸ್ಯೆ ಉಂಟುಮಾಡಿದ್ದೇನೆ. ನನ್ನ ತಪ್ಪುಗಳ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ ಎಂದು ಹುವಾಂಗ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು, ಎನ್‌ವಿಡಿಯಾದ ಉದ್ಯೋಗಿಗಳು, ಹೂಡಿಕೆದಾರರು, ಉದ್ಯಮ ಪಾಲುದಾರರು ಮತ್ತು ಗ್ರಾಹಕರಿಂದ ತಾವು ಮತ್ತೆ ಸಿಇಒ ಆಗಿ ಮರಳಬೇಕೆಂಬ ಒತ್ತಾಯಗಳು ಬಂದಿವೆ ಎಂದು ಅವರು ಹೇಳಿದ್ದಾರೆ. ಕಂಪನಿಯ ತಂತ್ರಜ್ಞಾನ, ಮಾರುಕಟ್ಟೆ ಮತ್ತು ಜಾಗತಿಕ ಸ್ಪರ್ಧೆಯ ಸವಾಲುಗಳ ನಡುವೆ ಆಡಳಿತ ಮಂಡಳಿಯು ತಮ್ಮ ಮರಳುವಿಕೆಯಿಂದ ಕಂಪನಿ, ಉದ್ಯೋಗಿಗಳು, ಷೇರುದಾರರು ಮತ್ತು ಅಮೆರಿಕಕ್ಕೆ ಒಳಿತಾಗುತ್ತದೆ ಎಂದು ನಿರ್ಧರಿಸಿದರೆ, ಮತ್ತೆ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ.
ಆದರೆ, ಹುವಾಂಗ್ ಎಕ್ಸ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಎನ್‌ವಿಡಿಯಾ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಬಂದಿದೆ ಎನ್ನಲಾಗಿದೆ. ಹುವಾಂಗ್ ಅವರನ್ನು ಮತ್ತೆ ಸಿಇಒ ಆಗಿ ಕರೆತರುವ ಉದ್ದೇಶ ಮಂಡಳಿಗೆ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ, ಕಂಪನಿಗೆ ಮರಳುವ ಅವರ ಆಸೆಗೆ ಸದ್ಯಕ್ಕೆ ತಡೆ ಬಿದ್ದಂತಾಗಿದೆ.



