
ಪ್ರಗತಿವಾಹಿನಿ ಸುದ್ದಿ; ಕಾರವಾರ: ಉತ್ತರ ಕನ್ನಡದ ಕರಾವಳಿಯಲ್ಲಿ ಕಳೆದ ಎಂಟು ವರ್ಷಗಳಿಂದ ನಡೆದಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಆಗಾಗ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಅದರಲ್ಲೂ ಉತ್ತರ ಕನ್ನಡ ವ್ಯಾಪ್ತಿಯಲ್ಲಿ ಈ ರಸ್ತೆ ನಿರ್ಮಾಣ ಗಜಪ್ರಸವದಂತಾಗಿದೆ. ಈಗಿನ್ನೂ ಸುಮಾರು ಶೇ.70ರಷ್ಟು ಮಾತ್ರ ಕಾಮಗಾರಿ ಮುಗಿದಿದ್ದು ಉಳಿದ ಭಾಗ ಇನ್ಯಾವಾಗ ಮುಗಿಯುವುದೋ ಎಂದು ಜನ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ನಡುವೆ ರಸ್ತೆ ಕಾಮಗಾರಿಗೆ ಕಲ್ಲುಗಳನ್ನು ಸ್ಪೋಟಿಸಲು ಜಿಲೆಟಿನ್‌ಗಳನ್ನು ಜೆಸಿಬಿಯಲ್ಲಿ ಸಾಗಿಸುತ್ತಿದ್ದದ್ದನ್ನು ನೋಡಿ ಜನ ಅಕ್ಷರಶಃ ಹೌಹಾರಿದ್ದಾರೆ.
ಹೌದು, ಈಗಾಗಲೇ ಈ ರಸ್ತೆ ಕಾಮಗಾರಿ ನಡೆಯುತ್ತಿರುವಾಗ ಸರಿಯಾದ ಸೂಚನಾ ಫಲಕಗಳನ್ನು ಹಾಕದ ಕಾರಣಕ್ಕೆ ನೂರಾರು ಜನ ಅಪಘಾತದಲ್ಲಿ ಪ್ರಾಣ ತೆತ್ತಿದ್ದಾರೆ. ಇನ್ನು ಗುಡ್ಡಗಳನ್ನು ಅವೈಜ್ಞಾನಿಕವಾಗಿ ಸ್ಪೋಟಿಸಿ ಕಲ್ಲುಗಳು ಉರುಳಿ ಬಿದ್ದು ಹಲವರು ಗಾಯಗೊಂಡಿದ್ದಾರೆ. ಅವೈಜ್ಞಾನಿಕವಾಗಿ ಗುಡ್ಡಗಳನ್ನು ಅಗೆದು ಮೂರು ಕಂದಮ್ಮಗಳು ಜೀವಂತ ಸಮಾಧಿಯಾಗಿವೆ.
ಇಷ್ಟಾದರೂ ರಸ್ತೆ ನಿರ್ಮಾಣದ ಖಾಸಗಿ ಕಂಪನಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ರಸ್ತೆ ನಿರ್ಮಾಣಕ್ಕೆ ಕಲ್ಲುಗಳನ್ನು ಸ್ಪೋಟಿಸಲು ಬಳಸುವ ಸುಮಾರು 250 ಕಿಲೋ ತೂಕದ ಜಿಲೆಟಿನ್ ಕಡ್ಡಿಗಳನ್ನು ಜೆಸಿಬಿಯಲ್ಲಿ ಅಜಾಗರೂಕತೆಯಲ್ಲಿ ಸಾಗಾಟ ಮಾಡುವ ಮೂಲಕ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಕಾಮಗಾರಿಗಾಗಿ ಕಲ್ಲುಗಳನ್ನು ಸ್ಪೋಟ ಗೊಳಿಸಲು ಅಜಾಗರೂಕತೆಯಿಂದ ಸಾಗಿಸುತ್ತಿದ್ದ ಜಿಲೆಟಿನ್ ನನ್ನು ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿ ಸೋಮವಾರ ಸಂಜೆ ವಶಕ್ಕೆ ಪಡೆಯಲಾಗಿದೆ. ಜೆಸಿಬಿ ಯಲ್ಲಿ ಸುಮಾರು 250 ಕೆಜಿಗೂ ಅಧಿಕ ಜಿಲೆಟಿನ್, ಸಾಗಾಟ ಮಾಡಲಾಗುತಿದ್ದು ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯವರು ವಶಕ್ಕೆ ಪಡೆದಿದ್ದಾರೆ. ಸ್ಪೋಟಕ ವಸ್ತುವಾದ ಜಿಲೆಟಿನ್ ಅನ್ನು ಈ ರೀತಿ ಅಜಾಗರೂಕತೆಯಿಂದ ಸಾಗಟ ಮಾಡುವುದು ನಿಯಮ ಬಾಹೀರ, ಪ್ರತ್ಯೇಕ ವಾಹನದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಿ ಕೊಂಡೊಯ್ಯಬೇಕು. ಆದರೆ ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೇ ಪ್ರತ್ಯೇಕ ವಾಹನದಲ್ಲಿ ಸಾಗಾಟ ಮಾಡದೇ ಜೆಸಿಬಿಯಲ್ಲಿ ಸಾಗಾಟ ಮಾಡಿದ್ದರ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕ್ರಿಕೇಟ್ ಪ್ರಿಯರಿಗೆ ಸಂತಸದ ಸುದ್ದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ