ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿಯ ಜೆಎನ್‍ಯು ವಿಶ್ವವಿದ್ಯಾಲಯ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸ್ವರಾಜ್ ಅಭಿಯಾನ ಮುಖ್ಯಸ್ಥ ಯೋಗೇಂದ್ರ ಯಾದವ್, ಕ್ಯಾಂಪಸ್ ಒಳಗೆ ನುಗ್ಗಿ ಮುಸುಕುಧಾರಿ ಗೂಂಡಾಗಳು ಹಿಂಸಾಚಾರ ನಡೆಸಿದರೂ ಪೊಲೀಸರು ತಡೆಯಲು ಮುಂದಾಗದೇ ಗೂಂಡಾಗಳ ರಕ್ಷಣೆಗೆ ನಿಂತಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಜೆಎನ್‍ಯು ಕ್ಯಾಂಪಸ್ ಗೆ ನುಗ್ಗಿದ ಮುಸುಕುಧಾರಿ ಧುಷ್ಕರ್ಮಿಗಳು ಹಲವಾರು ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಘಟನೆಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶಿ ಘೋಷ್ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಜೆಎನ್ಯುನಲ್ಲಿ ನಡೆದ ಹಿಂಸಾಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ನಡುವೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ವರಾಜ್ ಅಭಿಯಾನದ ಮುಖ್ಯಸ್ಥ ಯೋಗೇಂದ್ರ ಯಾದವ್ ಸಹ ಜೆಎನ್‍ಯು ಕ್ಯಾಂಪಸ್ ಪ್ರವೇಶಿಸಲು ಮುಂದಾದರು. ಆದರೆ, ಅವರನ್ನು ಬಲವಂತವಾಗಿ ಹೊರ ಕಳುಹಿಸಲಾಗಿದೆ. ಈ ವೇಳೆ ಮಾತನಾಡಿದ ಅವರು, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರೇ ಗೂಂಡಾಗಳಿಗೆ ರಕ್ಷಣೆ ನೀಡಿದ್ದಾರೆ. ಗೂಂಡಾಗಳು ವಿದ್ಯಾರ್ಥಿಗಳನ್ನು ಥಳಿಸುತ್ತಿದ್ದರೂ ಪೊಲೀಸರು ನಿಂತು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಿಶ್ವವಿದ್ಯಾನಿಲಯವು ಸಾಮಾನ್ಯವಾಗಿ ಕಟ್ಟುನಿಟ್ಟಾದ ಪ್ರವೇಶ ಮಾನದಂಡಗಳನ್ನು ಹೊಂದಿರುವಾಗ ಮುಸುಕುಧಾರಿ ಗುಂಪು ಕ್ಯಾಂಪಸ್ ಒಳಗೆ ಹೇಗೆ ಪ್ರವೇಶಿಸಿತು? ಅಲ್ಲದೆ, ಇಂತಹ ಸಂದರ್ಭದಲ್ಲಿ ಉಪ ಕುಲಪತಿ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬಹುದಿತ್ತು. ಕನಿಷ್ಟ ಮಾಧ್ಯಮಗಳಿಗೆ ಕರೆ ಮಾಡಿ ಕ್ಯಾಂಪಸ್ನಲ್ಲಿ ಏನಾಗುತ್ತಿದೆ? ಎಂಬುದನ್ನು ತೋರಿಸಬಹುದಿತ್ತು. ಆದರೆ, ಈಗಿನ ಉಪ ಕುಲಪತಿ ಜಗದೇಶ್ ಕುಮಾರ್ ಈ ಯಾವ ಕೆಲಸವನ್ನೂ ಮಾಡಿಲ್ಲ. ಇಂತಹ ವ್ಯಕ್ತಿಗಳಿಂದ ಜೆಎನ್‍ಯು ವಿಶ್ವವಿದ್ಯಾನಿಲಯದ ಬೌದ್ಧಿಕ ಹಾಗೂ ದೈಹಿಕ ವಿನಾಶವಾಗುತ್ತಿದೆ. ಹೀಗಾಗಿ ಇವರಿಗೆ ಮರ್ಯಾದೆ ಇದ್ದರೆ ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಈ ನಡುವೆ ಜೆಎನ್ ಯು ಸೀನಿಯರ್ ವಾರ್ಡನ್ ವಿದ್ಯಾರ್ಥಿಗಳಿಗೆ ಸುರಕ್ಷಿತೆಯನ್ನು ಒದಗಿಸಲಾಗದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ