
ಹೃದಯಾಘಾತಕ್ಕೆ ಬಲಿ
ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಜೋ ಸೈಮನ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಬೆಂಗಳೂರಿನಲ್ಲಿ ಫಿಲ್ಮ್ ಚೇಂಬರ್ ಸಭೆಯಲ್ಲಿ ಭಾಗಿಯಾಗಿದ್ದ ನಿರ್ದೇಶಕ ಜೋ ಸೈಮನ್ ಅವರು ವಾಅಶ್ ರೂಮ್ ಬಳಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಜೋ ಸೈಮನ್ ಕನ್ನಡದ ೩೦ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಹೋದರರ ಸವಾಲ್, ಒಂದು ಪ್ರೇಮದ ಕಥೆ, ಬಂಗಾರದ ಗುಡಿ, ಸಾಹಸಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದವು ಅವರ ಜನಪ್ರಿಯ ಸಿನಿಮಾಗಳು.
ಮಂಡ್ಯ ಮೂಲದ ಜೋ ಸೈಮನ್, ತಮ್ಮ ಓದನ್ನು ಮಂಡ್ಯದಲ್ಲಿ ಮುಗಿಸಿದ ನಂತರ 1967 ರಲ್ಲಿ ರಗಸ್ಯ ಪೊಲೀಸ್ 115 ಮೂಲಕ ಚಲನಚಿತ್ರ ರಂಗ ಪ್ರವೇಶಿಸಿದರು. ಪ್ರಾರಂಭದಲ್ಲಿ ಅವರು. ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಕೆಲಸ ಮಾಡಿದರು. ನಂತರ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಕರ್ನಾಟಕ ಚಾಲನಚಿತ್ರ ಅಕಾಡೆಮಿ ಅವರ ಜೀವಿತಾವಧಿ ಸಾಧನೆ ಗುರುತಿಸಿ 2013 ರಲ್ಲಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
