Kannada NewsKarnataka NewsLatestPolitics

*ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಮುಂದಿನ ತಿಂಗಳು ಬೃಹತ್ ಉದ್ಯೋಗ ಮೇಳ*

ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: “ಬೆಂಗಳೂರಿನಲ್ಲಿ ಮುಂದಿನ ಜನವರಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ನಂತರದ ದಿನಗಳಲ್ಲಿ ಪ್ರತಿ ಜಿಲ್ಲಾ ಮತ್ತು ವಲಯವಾರು ಉದ್ಯೋಗ ಮೇಳ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಉದ್ಯೋಗ ಮೇಳ ಕುರಿತ ಸಭೆಯ ನಂತರ ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಪ್ರತಿಕ್ರಿಯೆ ನೀಡಿದ ಅವರು, “ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸರ್ಕಾರದಿಂದಲೇ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ವಿಸ್ತೃತ ಚರ್ಚೆಯನ್ನು ಸಭೆಯಲ್ಲಿ ನಡೆಸಲಾಯಿತು.

ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ನಮ್ಮ ಕನ್ನಡಿಗರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ದೊರಕುವಂತಾಗಬೇಕು. ಐಟಿ- ಬಿಟಿ, ಹೋಟೆಲ್, ಉತ್ಪಾದನಾ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಯುವಕ- ಯುವತಿಯರಿಗೆ ಹೆಚ್ಚಿನ ಅವಕಾಶ ಸಿಗುವಂತಾಗಬೇಕು. ಆದ ಕಾರಣ ಕೌಶಲ್ಯ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದ ರೂಪುರೇಷೆಗಳನ್ನು ಶೀಘ್ರದಲ್ಲೇ ನೀಡಲಾಗುವುದು.

ಕೈಗಾರಿಕಾ ಕ್ಷೇತ್ರ ಸೇರಿದಂತೆ ಇತರೇ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಣ್ಣ ಮತ್ತು ಮಧ್ಯಮ, ಬೃಹತ್ ಕೈಗಾರಿಕಾ, ಯುವಜನ, ಉನ್ನತ ಶಿಕ್ಷಣ, ಕಾರ್ಮಿಕ, ಐಟಿ-ಬಿಟಿ ಸಚಿವರು ಮತ್ತಿತರರು ಉತ್ತಮ ಸಲಹೆಗಳನ್ನು ನೀಡಿದ್ದಾರೆ.

ಕೈಗಾರಿಕೆಗಳಿಗೆ ಅನುಗುಣವಾಗಿ ಉದ್ಯೋಗದಾತರನ್ನು ಸೃಷ್ಟಿಸಬೇಕು ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರ ಮತ್ತು ಸಚಿವರ ನೇತೃತ್ವದಲ್ಲಿ ಉಪಸಮಿತಿ ರಚಿಸಲಾಗಿದೆ. ಈ ಸಮಿತಿಯು ಉದ್ದಿಮೆದಾರರ ಬಳಿ ಚರ್ಚೆ ನಡೆಸುತ್ತದೆ. ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಹೊಸ ರೂಪುರೇಷೆ ಹೊಂದಿರುವ ಬೃಹತ್ ಉದ್ಯೋಗ ಮೇಳ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ.

ಬಿಜೆಪಿ ಸರಕಾರ ಯುವ ಸಮುದಾಯಕ್ಕೆ ಉದ್ಯೋಗ ನೀಡಲು ವಿಫಲವಾಗಿದೆ. ಈ ವಿಚಾರವಾಗಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ದನಿ ಎತ್ತಿದ್ದರು. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಯುವನಿಧಿ ಕಾರ್ಯಕ್ರಮ ಜಾರಿಗೆ ತಂದಿದೆ. ಜ.12 ರಂದು ಶಿವಮೊಗ್ಗದಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಗುವುದು.”

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button