Belagavi NewsBelgaum NewsKannada NewsKarnataka NewsLatest

ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಜೊಲ್ಲೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಕಾರ್ಮಿಕರ ಆರೋಗ್ಯದ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಕಾರ್ಮಿಕರು ಕಾರ್ಖಾನೆಯ ಬೆನ್ನೆಲುಬು, ಹಾಗಾಗಿ ಕಾರ್ಖಾನೆಯ ಪ್ರಗತಿಗೆ ಕಾರ್ಮಿಕರ ಆರೋಗ್ಯ ಮುಖ್ಯ ಎಂದು ಕಾರ್ಖಾನೆಯ ಮಾರ್ಗದರ್ಶಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಶ್ರೀ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕನೇರಿ ವತಿಯಿಂದ ಆಯೋಜಿಸಿದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕನೇರಿ ವತಿಯಿಂದ ಜುಲೈ ೨೪ ರಿಂದ ೨೬ ರವರೆಗೆ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯಲಿದೆ. ಕಾರ್ಮಿಕರು, ರೈತರು ಹಾಗೂ ಆಡಳಿತ ಮಂಡಳಿಯ ಸರಿಯಾದ ಯೋಜನೆಗಳಿಂದ ಕಾರ್ಖಾನೆಯ ಪ್ರಗತಿಯಾಗಿದೆ.

ಪ್ರಸ್ತುತ ಹಾಲಸಿದ್ಧನಾಥ ಕಾರ್ಖಾನೆ ಪ್ರಗತಿಯತ್ತ ಸಾಗುತ್ತಿದೆ. ೮೫೦೦ ಟನ್ ಸಾಮರ್ಥ್ಯದೊಂದಿಗೆ ಕಬ್ಬು ನುರಿಸುಲಾಗುತ್ತಿದೆ. ೧೫೦ ಕೆಎಲ್‌ಪಿಡಿ ಎಥೆನಾಲ್ ಅನ್ನು ಉತ್ಪಾದಿಸುತ್ತದೆ. ಸಮಯದಲ್ಲಿ ಕಾರ್ಖಾನೆಯ ಆವರಣದಲ್ಲಿ ರೈತ ಭವನ, ಕಾರ್ಮಿಕರ ಕ್ಯಾಂಟೀನ್, ಬ್ಯಾಂಕ್, ಬಜಾರ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಈ ವರ್ಷ ಕಾರ್ಖಾನೆಯಲ್ಲಿ ಪೂರ್ವ ಹಂಗಾಮಿನ ಕಾಮಗಾರಿ ನಡೆಯುತ್ತಿದ್ದು, ಈ ಬಾರಿಯ ಹಂಗಾಮುವನ್ನು ಯಾವುದೇ ಕಡಿತವಿಲ್ಲದೆ ಯಶಸ್ವಿಗೊಳಿಸಲು ಕಾರ್ಮಿಕರು ಸಿದ್ಧತೆ ಮಾಡಿಕೊಳ್ಳಬೇಕು. ದಿನದಿಂದ ದಿನಕ್ಕೆ ಕಾರ್ಖಾನೆಯು ಪ್ರಗತಿಯನ್ನು ಮುಂದುವರೆಸುತ್ತ ಭವಿಷ್ಯದಲ್ಲಿ ೧೫೦೦೦ ಟನ್ ಸಾಮರ್ಥ್ಯದೊಂದಿಗೆ ಕಬ್ಬು ನುರಿಸುವ ಮತ್ತು ೫೦೦ ಕೆಎಲ್‌ಪಿಡಿ ಎಥೆನಾಲ್ ಉತ್ಪಾದನಾ ಮೈಲಿಗಲ್ಲನ್ನು ತಲುಪುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

ಕಾರ್ಖಾನೆಯ ಪ್ರಗತಿಗೆ ಕಾರ್ಮಿಕರು ಮುತುವರ್ಜಿ ವಹಿಸಬೇಕು, ಏನೇ ಸಮಸ್ಯೆಗಳಿದ್ದರೂ ಪರಿಹರಿಸಿ, ಅವರಿಗೆ ಉತ್ತಮ ಸೌಲಭ್ಯ ನೀಡಲಾಗುವುದು. ಕಾರ್ಖಾನೆಯ ಸ್ಥಿತಿ ಸುಧಾರಿಸುತ್ತಿದ್ದಂತೆ ಅವರಿಗೂ ಉತ್ತಮ ಸಂಭಾವನೆ ಸಿಗುತ್ತದೆ. ಕಾರ್ಖಾನೆಯ ಅಭಿವೃದ್ಧಿಗೆ ಎಲ್ಲರೂ ಸಮತೋಲಿತ ಪ್ರಯತ್ನ ಮಾಡಬೇಕು, ಉತ್ತಮ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುವುದು ಎಂದರು.

ಅಧ್ಯಕ್ಷ ಎಂ.ಪಿ.ಪಾಟೀಲ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು ದುಶ್ಚಟಗಳಿಂದ ದೂರವಿರಬೇಕು. ಕಾರ್ಖಾನೆ ಹಾಗೂ ಶಿಬಿರದ ವತಿಯಿಂದ ನೀಡಲಾಗುವ ಆರೋಗ್ಯ ವಿಮೆಯ ಸದುಪಯೋಗ ಪಡೆದು ತಮ್ಮ ಆರೋಗ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ಸುಹಾಸ ಗುಗೆ, ಕಾರ್ಮಿಕ ಪ್ರತಿನಿಧಿ ರಾಜು ಖಂದಾರೆ, ಪ್ರಧಾನ ವ್ಯವಸ್ಥಾಪಕ ಕೇಪಣ್ಣ ಗಿಜವನೆ, ರೋಹಿತ ಪರೀಟ ಮಾತನಾಡಿದರು. ಡಾ. ಶಂತನು ಪಾಲಕರ ಹೃದ್ರೋಗದ ಕುರಿತು ಕಾರ್ಮಿಕರಿಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ರಮೇಶ ಪಾಟೀಲ, ವೈಶಾಲಿ ನಿಕಾಡೆ, ಸುನೀಲ ಪಾಟೀಲ ಹಾಗೂ ಕಾರ್ಖಾನೆಯ ಇಲಾಖಾ ಮುಖ್ಯಸ್ಥರು ಹಾಗೂ ಸಿದ್ಧಗಿರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಕೃಷಿ ಅಧಿಕಾರಿ ನಾಮದೇವ ಬನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಶ್ರೀಕಾಂತ ಬನ್ನೆ ಸ್ವಾಗತಿಸಿದರು. ಸಂಚಾಲಕ ಜಯವಂತ ಭಾಟ್ಲೆ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button