Kannada NewsKarnataka NewsLatest

ರಾಣಿ ಚನ್ನಮ್ಮ ವಿವಿ ಅಭಿವೃದ್ಧಿಯಾಗದಿರಲು ಪತ್ರಕರ್ತರು ಕಾರಣ ?!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮ ವಿವಿಯ ಅಭಿವೃದ್ಧಿ ಕುಂಠಿತವಾಗಲು ಪತ್ರಕರ್ತರೇ ಕಾರಣ ಎಂದು ವಿವಿ ಕುಲಪತಿ ಪ್ರೊ. ರಾಮಚಂದ್ರ ಗೌಡ ಆರೋಪಿಸಿದ ಘಟನೆ ಶನಿವಾರ ನಡೆದಿದೆ.

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ೧೧ನೇ ಘಟಿಕೋತ್ಸವದ ನಿಮಿತ್ತ ಶನಿವಾರ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ವಿಶ್ವ ವಿದ್ಯಾಲಯವು ನ್ಯಾಕ್‌ನಲ್ಲಿ ಉತ್ತಮ ಅಂಕ ಪಡೆದಿದೆ ಎಂದು ಪ್ರೊ. ರಾಮಚಂದ್ರ ಗೌಡ ಹೇಳಿದರು. ಇದನ್ನು ಪ್ರಶ್ನೆ ಮಾಡಿದ ಪತ್ರಕರ್ತರು, ಬಿಪ್ಲಸ್ ಗ್ರೇಡ್ ದೊರೆತಿರುವುದನ್ನು ಉತ್ತಮ ಎಂದು ಹೇಗೆ ಪರಿಗಣಿಸುತ್ತೀರಿ ಎಂದರು.

ಪ್ರಶ್ನೆಯಿಂದ ಅಸಮಾಧಾನಗೊಂಡ ಕುಲಪತಿಗಳು, ಇದಕ್ಕೆ ನೀವೇ (ಪತ್ರಕರ್ತರೇ ) ಕಾರಣ. ವಿಶ್ವ ವಿದ್ಯಾಲಯದ ಬಗ್ಗೆ ಮಾಧ್ಯಮಗಳಲ್ಲಿ ಋಣಾತ್ಮಕ ವಿಷಯಗಳನ್ನಷ್ಟೇ ಬಿಂಬಿಸಲಾಗುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಇದರಿಂದ ನ್ಯಾಕ್‌ನಲ್ಲಿ ಕಡಿಮೆ ಗ್ರೇಡ್ ಪಡೆಯುವಂತಾಗಿದೆ ಎಂದರು.

ಜನರ ಸಹಕಾರ ಸಿಕ್ಕಿದ್ದರೆ ವಿಶ್ವ ವಿದ್ಯಾಲಯವು ಇಷ್ಟು ಹೊತ್ತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುತ್ತಿತ್ತು. ಹಿರೇಬಾಗೇವಾಡಿಯಲ್ಲಿ ಸರಕಾರ ನೀಡಿದ ಜಾಗಕ್ಕೆ ರಸ್ತೆ ನಿರ್ಮಿಸಲು ಹೊರಟಾಗ ಕೆಲ ರೈತರಿಂದ ತಕರಾರು ಬಂತು. ಕೋಟ್ಯಾಂತರ ಖರ್ಚು ಮಾಡಿ ನಿರ್ಮಿಸಿದ ಕಂಪೌಂಡ್ ಗೋಡೆಯನ್ನು ಒಡೆದು ೨೦ ಅಡಿ ಸ್ಥಳ ಬಿಟ್ಟು ಪುನಃ ನಿರ್ಮಿಸಬೇಕಾಯಿತು. ಅಲ್ಲದೆ, ನಮ್ಮ ಶ್ರಮವೆಲ್ಲ ವಿವಿಧ ಪ್ರಕರಣಗಳಲ್ಲಿ, ಪೊಲೀಸ್ ಠಾಣೆಗಳಿಗೆ ಓಡಾಡುವುದರಲ್ಲೇ ವ್ಯರ್ಥವಾಯಿತು ಎಂದರು.

ಇನ್ನು, ವಿಶ್ವ ವಿದ್ಯಾಲಯದಲ್ಲಿ ಕೆಲ ಕೋರ್ಸ್‌ಗಳಿಗೆ ಕೇವಲ ೪-೫ ಜನ ವಿದ್ಯಾರ್ಥಿಗಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೂ ಪುನಃ ಪತ್ರಕರ್ತರನ್ನೇ ಹೊಣೆಯಾಗಿಸಿದ ರಾಮಚಂದ್ರೇಗೌಡರು, ಜರ್ನಲಿಸಂ ವಿಷಯದಲ್ಲಿ ಮಾತ್ರ ಹೀಗಾಗುತ್ತಿದೆ. ೪೦ ಜನ ಪ್ರವೇಶ ಪಡೆದರೂ ತರಗತಿಗಳಿಗೆ ಕೇವಲ ೪-೫ ಜನ ಬರುತ್ತಾರೆ. ಹಾಗಾಗಿ ಈ ವರ್ಷ ಬಯೋಮೆಟ್ರಿಕ್ ವ್ಯವಸ್ಥೆ ಮಾಡಿದ್ದೇವೆ ಎಂದರು.

ವಿವಿ ಹುಟ್ಟಿದ್ದು ಹೇಗೆ ಗೊತ್ತೇ ಕುಲಪತಿಗಳೇ?

ವಿಶ್ವವಿದ್ಯಾಲಯದ ಅಭಿವೃದ್ಧಿಯ ಹೊಣೆ ಹೊತ್ತಿರುವ ರಾಮಚಂದ್ರ ಗೌಡ, ವಿಶ್ವವಿದ್ಯಾಲಯ ಆರಂಭವಾಗಲು ಹೋರಾಟದ ಮುಂಚೂಣಿಯಲ್ಲಿ ನಿಂತವರೇ ಪತ್ರಕರ್ತರು ಎನ್ನುವ ಕನಿಷ್ಠ ಮಾಹಿತಿಯನ್ನೂ ತಿಳಿದುಕೊಳ್ಳದಿರುವುದು ಹಾಗೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದನ್ನು ಪತ್ರಕರ್ತರ ಮೇಲೆ, ಸ್ಥಳೀಯ ಜನರ ಮೇಲೆ ಹಾಕುವ ಪ್ರಯತ್ನ ಮಾಡಿದ್ದು ವಿಪರ್ಯಾಸವೇ ಆಗಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಗೆ ಮುನ್ನ ನಡೆದ ಹೋರಾಟದಲ್ಲಿ ಇಲ್ಲಿಯ ಅನೇಕ ಪತ್ರಕರ್ತರು ಮುಂದೆ ನಿಂತಿದ್ದಲ್ಲದೆ ರಾಜಕಾರಣಿಗಳನ್ನೂ ಬಡಿದೆಬ್ಬಿಸಿ ಕೆಲಸವಾಗುವಂತೆ ಮಾಡಿದ್ದಾರೆ. ಆದರೆ ವಿಶ್ವವಿದ್ಯಾಲಯ ಹೇಗಿರಬೇಕು ಎಂದು ಹೋರಾಟಗಾರರು ಕನಸು ಕಂಡಿದ್ದರೋ ಅದು ಆಗಲೇ ಇಲ್ಲ. ಶಿವಾನಂದ ಹೊಸಮನಿ ಅವರನ್ನು ಹೊರತುಪಡಿಸಿ ಉಳಿದಿಬ್ಬರೂ ಅಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡಲೇ ಇಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನೂ ಮಾಡಲಿಲ್ಲ. ರಾಜ್ಚದಲ್ಲೇ ದೊಡ್ಡದಾದ ವಿಶ್ವವಿದ್ಯಾಲಯದ ಅಭಿವೃದ್ಧಿ ಕಡೆಗೆ ಗಮನಹರಿಸುವ ಬದಲು, ಸ್ಥಳೀಯ ರಾಜಕಾರಣದಲ್ಲಿ ಹೆಚ್ಚು ಆಸಕ್ತಿವಹಿಸಿ, ಜವಾಬ್ದಾರಿ ನಿಭಾಯಿಸದಿರುವುದು ವಿಪರ್ಯಾಸ.

ಇದೇ ಜೂನ್ ತಿಂಗಳಿಗೆ ರಾಮಚಂದ್ರಗೌಡರ ಅವಧಿ ಮುಕ್ತಾಯವಾಗುತ್ತಿದೆ. ಮುಂದಿನ ದಿನಗಳಲ್ಲಾದರೂ ವಿಶ್ವವಿದ್ಯಾಲಯ ನಮ್ಮದು ಎನ್ನುವ ಭಾವನೆ ಇಲ್ಲಿನ ಜನರಲ್ಲಿ ಬರುವಂತೆ ವಿವಿ ಕೆಲಸ ಮಾಡಬೇಕಿದೆ. ಅಂತಹ ಮನೋಭಾವನೆ ಇರುವ ಕುಲಪತಿಗಳನ್ನು ನೇಮಿಸಬೇಕಿದೆ.

೨೦ರಂದು ಘಟಿಕೋತ್ಸವ

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ೧೧ನೆಯ ಘಟಿಕೋತ್ಸವವು ಮಾರ್ಚ್ ೨೦ರಂದು ಬೆಳಗ್ಗೆ ೧೧ ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ ಎಂದು ವಿವಿಯ ಕುಲಪತಿ ಪ್ರೊ. ಎಂ. ರಾಮಚಂದ್ರ ಗೌಡ ತಿಳಿಸಿದರು.

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿರುವರು ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ ಒಟ್ಟು ೪೭,೧೮೫ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಜೊತೆಗೆ ೧೧ ಸ್ವರ್ಣ ಪದಕಗಳನ್ನು ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿಗೆ ನೀಡಲಾಗುವುದು. ೨೭ ಪಿಹೆಚ್.ಡಿ. ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ದಿ. ಸುರೇಶ್ ಸಿ.ಅಂಗಡಿ ಅವರಿಗೆ ಸಮಾಜ ಸೇವೆಗಾಗಿ ಮರಣೋತ್ತರವಾಗಿ, ಹಿರಿಯ ವಿದ್ವಾಂಸ, ಹಾಗೂ ಸಾಹಿತಿ ಪ್ರೊ.ಮಲ್ಲೆಪುರಂ ಜಿ. ವೆಂಕಟೇಶ ಅವರಿಗೆ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಪ್ರೊ. ರಾಮಚಂದ್ರ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲ ಸಚಿವರಾದ ರಾಜಶ್ರೀ ಜೈನಾಪುರ, ಮೌಲ್ಯಮಾಪನ ಕುಲಸಚಿವ ಪ್ರೊ. ಶಿವಾನಂದ ಎಸ್. ಗೊರನಾಳೆ, ಪ್ರೊ. ಎಸ್.ಬಿ. ಆಕಾಶ್ ಇದ್ದರು.

https://pragati.taskdun.com/11th-annual-convocation-of-ranichannamma-university-on-20th-mar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button