ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 539.86 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನೆರವೇರಿಸಿದರು.
ಜಿಲ್ಲಾಡಳಿತ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನದಲ್ಲಿ ಗಾಂಧಿ ಭವನ, ಗ್ರೇಟರ್ ರಾಜಸೀಟು, ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 10 ಹೆಚ್‍ಪಿ ವರೆಗೆ ಉಚಿತವಾಗಿ ವಿದ್ಯುತ್ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಫಲಾನುಭವಿಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ 1,13,132 ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಜಿಲ್ಲೆಯಲ್ಲಿ 12 ಸಮುದಾಯ ಭವನ ನಿರ್ಮಾಣಕ್ಕೆ 2.2 ಕೋಟಿ ರೂ. ಬಿಡುಗಡೆ ಮಾಡಿದೆ. ಹಾಗೆಯೇ ಕೊಡವ ಸಮಾಜಗಳ ಒಕ್ಕೂಟಕ್ಕೆ ರೂ. 10 ಕೋಟಿ ಸರ್ಕಾರದಿಂದ ಬಿಡುಗಡೆ ಮಾಡಿದೆ. ಜಿಲ್ಲೆಯ 343 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಗುರುತಿಸಿ ಸ್ಮಶಾನಕ್ಕಾಗಿ ಭೂಮಿ ಕಾಯ್ದಿರಿಸಲಾಗಿದೆ. ಜೊತೆಗೆ ಬೆಂಗಳೂರಿನಲ್ಲಿ ಕೊಡವ ಸಮಾಜದ ಒಕ್ಕೂಟಕ್ಕೆ 7 ಎಕರೆ ಭೂಮಿಯನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
ಸರ್ಕಾರ ಕೊಡಗು ಜಿಲ್ಲೆಗೆ ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಪ್ಯಾಕೆಜ್ ಪ್ರಕಟಿಸಿದೆ. ಹಾಗೆಯೇ ಮೈಸೂರು ಕುಶಾಲನಗರ ಚತುಷ್ಪಥ ಹೆದ್ದಾರಿ ಅಭಿವೃದ್ಧಿಗೆ ಪ್ರಧಾನಮಂತ್ರಿ ಅವರು ಈಗಾಗಲೇ ಚಾಲನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
ರಾಜ್ಯದ ಪ್ರಗತಿಗೆ ಶ್ರೀಸಾಮಾನ್ಯ ಬಡವರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸರ್ಕಾರ ಎಲ್ಲಾ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶ್ರೀಸಾಮಾನ್ಯರ ಬದುಕು ಬದಲಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. 30 ರಿಂದ 50 ಸಾವಿರ ಕುಟುಂಬಗಳ ಫಲಾನುಭವಿಗಳಿಗೆ ಒಂದಲ್ಲ ಒಂದು ಯೋಜನೆಗಳು ತಲುಪಿವೆ ಎಂದು ಮುಖ್ಯಮಂತ್ರಿ ಅವರು ವಿವರಿಸಿದರು.
ಸರ್ಕಾರ ಎಲ್ಲರಲ್ಲೂ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ. ನಾಡನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ನೆಚ್ಚಿನ ಪ್ರಧಾನಮಂತ್ರಿ ಅವರು ದೇಶದ ಸುರಕ್ಷತೆಗೆ, ಭದ್ರತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮೂಲಭೂತ ಸೌಕರ್ಯ ಹಾಗೂ ಸಾಮಾಜಿಕ ನ್ಯಾಯ ಎಲ್ಲರಿಗೂ ತಲುಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಅವರು ನುಡಿದರು.
ಪ್ರತಿಯೊಂದು ಕುಟುಂಬಕ್ಕೂ ಕುಡಿಯುವ ನೀರು ಸಂಪರ್ಕ ಕಲ್ಪಿಸಬೇಕು ಎಂಬ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆಯಡಿ ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ 40 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದರು.
‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದಲ್ಲಿ 16 ಸಾವಿರ ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಅಧಿಕಾರ ವಹಿಸಿಕೊಂಡ ನಾಲ್ಕು ಗಂಟೆಯಲ್ಲಿ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಿ ಬಡ ವಿದ್ಯಾರ್ಥಿಗಳಿಗೆ 12 ಸಾವಿರ ಕೋಟಿ ರೂ.ವನ್ನು ರೈತರ ಮಕ್ಕಳಿಗೆ ಒದಗಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.’
ರೈತರ ಆದಾಯ ಹೆಚ್ಚಳವಾದಾಗ ನಾಡಿಗೆ ದೊಡ್ಡ ಶಕ್ತಿ ತುಂಬಲಿದೆ. ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ.ವರೆಗೆ ಸಹಕಾರ ಸಂಘಗಳ ಮೂಲಕ ಸಾಲ ವಿತರಿಸಲಾಗುತ್ತದೆ ಎಂದರು.
ರೈತರಿಗೆ ಜೀವನ್ ಜ್ಯೋತಿ ಯೋಜನೆ ಜಾರಿಗೊಳಿಸಲಾಗಿದ್ದು, 2 ಲಕ್ಷ ರೂ.ವರೆಗೆ ಸಹಾಯಧನ ಕಲ್ಪಿಸಲಾಗುತ್ತದೆ. ಯಶಸ್ಸಿನಿ ಯೋಜನೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
ದೇಶ ವಿದೇಶದಿಂದ ಕೊಡಗು ಜಿಲ್ಲೆಗೆ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಮೈಸೂರು ಸಕ್ರ್ಯೂಟ್‍ನಲ್ಲಿ ಕೊಡಗು ಸೇರಿದ್ದು, ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲಾಗಿದೆ ಎಂದರು.
ಆರೋಗ್ಯ, ಶಿಕ್ಷಣ, ವಸತಿ ಹಾಗೂ ರಸ್ತೆ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ಬೆಳೆ ಹಾನಿ ಪರಿಹಾರವನ್ನು ಸಹ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿತರಿಸಿದರು.
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಪ್ರತಾಪ್‍ಸಿಂಹ ನಾಯಕ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಚೆನ್ನಿಲ ತಿಮ್ಮಪ್ಪ ಶೆಟ್ಟಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ