*ಹಿರಿಯ ಪತ್ರಕರ್ತ ಕೆ.ಎಸ್.ಸಚ್ಚಿದಾನಂದಮೂರ್ತಿ ವಿಧಿವಶ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಕಂಬನಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದಮೂರ್ತಿ ವಿಧಿವಶರಾಗಿದ್ದಾರೆ.
ಭಾರತೀಯ ಸಂಪಾದಕರ ಕೂಟದ (Editors Guild of India) ದ ಪ್ರಧಾನ ಕಾರ್ಯದರ್ಶಿಗಳಾಗಿ, ಪ್ರೆಸ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು, ದೆಹಲಿಯಲ್ಲಿ ಕರ್ನಾಟಕದ ಪ್ರಸಿದ್ಧ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ‘ಮಲಯಾಳಂ ಮನೋರಮಾ’ ಮತ್ತು ‘ದಿ ವೀಕ್’ ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಪತ್ರಕರ್ತ ಸಚ್ಚಿದಾನಂದ ಮೂರ್ತಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕಂಬನಿ ಮಿಡಿದಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ಹಿರಿಯ ಪತ್ರಕರ್ತ, ‘ಮಲಯಾಳ ಮನೋರಮಾ’ ಮತ್ತು ‘ದಿ ವೀಕ್’ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.
ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ದು:ಖ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಚ್ಚಿದಾನಂದ ಮೂರ್ತಿ ಅಗಲಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಸಚ್ಚಿದಾನಂದಮೂರ್ತಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಕೆ.ಎಸ್. ಸಚ್ಚಿದಾನಂದಮೂರ್ತಿ ಅವರು ಮಾಧ್ಯಮ ಕ್ಷೇತ್ರಕ್ಕೆ ಮಾಡಿರುವ ಸೇವೆ ಅನನ್ಯವಾದುದು. ಅವರ ಸಾವಿನಿಂದ ಮಾಧ್ಯಮ ಲೋಕದಿಂದ ಪ್ರಾಮಾಣಿಕ ಪ್ರತಿಭೆಯೊಂದು ಕಣ್ಮರೆಯಾದಂತಾಗಿದೆ.
ಅನೇಕ ರಾಜಕೀಯ ವಿದ್ಯಮಾನಗಳು, ಘಟನೆಗಳು ಇವರ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ದಾಖಲಾಗಿದ್ದವು. ದೆಹಲಿಯಲ್ಲಿ ಕರ್ನಾಟಕದ ಪರವಾಗಿ ದನಿ ಎತ್ತುವ ಪತ್ರಕರ್ತರ ಅನಿವಾರ್ಯದ ದಿನಗಳಲ್ಲೇ ಇವರನ್ನು ಕಳೆದುಕೊಂಡಿರುವುದು ದುಃಖದ ವಿಚಾರ.
ನಮ್ಮನ್ನು ಅಗಲಿರುವ ಇವರಿಗೆ ಭಾವಪೂರ್ಣ ವಿದಾಯ ಹೇಳುತ್ತೇನೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ” ಎಂದು ಪ್ರಾರ್ಥಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ