ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬಿಜೆಪಿ ಕಾರ್ಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯುವ ಸಾಮಾರಂಭದಲ್ಲಿ ಜೆ.ಪಿ ನಡ್ಡಾ ಅವರಿಗೆ ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಸಮಾರಂಭದಲ್ಲಿ ಕೇಂದ್ರ ಸಚಿವರು ಮತ್ತು ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ.
ಈ ಹಿಂದೆ ಕೇಂದ್ರ ಸಚಿವರಾಗಿದ್ದ ಜೆ.ಪಿ. ನಡ್ಡಾ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಪಂಚರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆ.ಪಿ ನಡ್ಡಾ ಪೂರ್ಣಪ್ರಮಾಣಲ್ಲಿ ಅಧ್ಯಕ್ಷರಾಗಿ ನಿಯುಕ್ತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿತ್ತು. ಬಳಿಕ ಎನ್ಡಿಎ-2 ಸರ್ಕಾರದಲ್ಲಿ ಅಮಿತ್ ಶಾ ಅವರು ಗೃಹ ಸಚಿವರಾಗಿ ಸಂಪುಟ ಸೇರ್ಪಡೆಯಾದ ಬಳಿಕ ಜೆ.ಪಿ. ನಡ್ಡಾ ಅವರು ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗುವ ನಿರೀಕ್ಷೆಗಳಿದ್ದವು. ಆದರೆ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರಿಂದ ಈ ಮೂರು ರಾಜ್ಯಗಳ ಚುನಾವಣೆ ಪಕ್ಷದ ಪಾಲಿಗೆ ಅಗ್ನಿಪರೀಕ್ಷೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಈ ಚುನಾವಣೆ ಮುಗಿಯುವವರೆಗೂ ಪಕ್ಷದ ಚುಕ್ಕಾಣಿಯಲ್ಲಿ ಮುಂದುವರೆದಿದ್ದರು.
ಹಿಮಾಚಲಪ್ರದೇಶ ಮೂಲದವರಾದ ಜೆ.ಪಿ. ನಡ್ಡಾ(58) ಅವರು ಹಿಂದಿನ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆರ್ ಎಸ್ ಎಸ್ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ನಡ್ಡಾ ಸಂಘಟನಾ ಚತರುರರೂ ಆಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜವಾಬ್ದಾರಿಯನ್ನು ನಡ್ಡಾ ಸಮರ್ಥವಾಗಿ ನಿಭಾಯಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ