*ನೋಟು ಅಮಾನ್ಯೀಕರಣ ಕಾನೂನು ಬಾಹಿರ; ಭಿನ್ನ ತೀರ್ಪು ಪ್ರಕಟಿಸಿದ ಜಸ್ಟಿಸ್ ನಾಗರತ್ನ*

 *ನೋಟು ನಿಷೇಧವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್*

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: 2016 ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮಾಡಿದ್ದು, ಇದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದೆ.
ಅಲ್ಲದೆ ಕೇಂದ್ರ ಸರಕಾರವು ಅದನ್ನು ನಿಷೇಧಿಸಿದೆ ಎಂಬ ಕಾರಣಕ್ಕೆ ನಿರ್ಧಾರವನ್ನು ತಪ್ಪೆಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಆರ್‌’ಬಿಐ ಒಪ್ಪಿಗೆ ಪಡೆದೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಎಸ್.ಎ.ನಜೀರ್ ನೇತ್ವತದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠ ಈ ತೀರ್ಪು ಪ್ರಕಟಿಸಿದೆ. ನಝೀರ್ ಅವರು ಜನವರಿ 4ರಂದು ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಅವರ ಮಹತ್ವದ ಕೊನೆಯ ತೀರ್ಪು ಎನ್ನಲಾಗಿದೆ.
ನೋಟು ಅಮಾನ್ಯೀಕರಣದ 2016ರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಸಾಂವಿಧಾನಿಕ ಪೀಠ, ಆರ್ಥಿಕ ಕ್ರಮಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವಾಗ ಗಣನೀಯ ನಿಯಂತ್ರಣವಿರಬೇಕು. ಅಂತಹ ಕ್ರಮಗಳ ಹಿಂದಿನ ನಿರ್ಧಾರವನ್ನು ನಾವು ನ್ಯಾಯಿಕ ದೃಷ್ಟಿಯಿಂದ ನೋಡಲಾಗದು ಎಂದ ಹೇಳಿದೆ.
ಆದರೆ ನ್ಯಾಯಮೂರ್ತಿ ಬಿ.ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದಾರೆ.
  ನನ್ನ ಅಭಿಪ್ರಾಯದಲ್ಲಿ ನವೆಂಬರ್ 8ರ ಅಧಿಸೂಚನೆ ಮೂಲಕ ನೋಟು ಅಮಾನ್ಯ ಮಾಡಿದ ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಸ್ಥಿತಿಯನ್ನು ಈಗ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ನಾಗರತ್ನ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಭಿನ್ನ ತೀರ್ಪು ಪ್ರಕಟಿಸಿದ ಜಸ್ಟಿಸ್ ನಾಗರತ್ನ

 ರಿಸರ್ವ್ ಬ್ಯಾಂಕಿನ ಕೇಂದ್ರೀಯ ಮಂಡಳಿಯ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ವಿಶೇಷ ಪೀಠವು ಮೋದಿ ಸರಕಾರದ ನೋಟು ರದ್ದು ಪ್ರಕ್ರಿಯೆಯು ಸರಿ ಎಂದು ಬಹುಮತದಿಂದ ತೀರ್ಪು ನೀಡಿದೆ.
ಆದರೆ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರು ಈ ತೀರ್ಪನ್ನು ಒಪ್ಪದೆ ಭಿನ್ನ ತೀರ್ಪು ಪ್ರಕಟಿಸಿದರು. “ನೋಟು ರದ್ದತಿ ತೀರ್ಪನ್ನು ಸಂಸತ್ತಿನಲ್ಲಿ ಕಾನೂನು ತಂದು ಮಾಡಬೇಕೇ ಹೊರತು, ಕೇಂದ್ರ ಸರಕಾರವೇ ನೇರ ರದ್ದು ಪಡಿಸುವುದಲ್ಲ” ಎಂದು ಜಸ್ಟಿಸ್ ನಾಗರತ್ನ ತೀರ್ಪಿತ್ತರು.
ನೋಟು ಅಮಾನ್ಯೀಕರಣ ಕುರಿತ ಕೇಂದ್ರದ ಅಧಿಸೂಚನೆ ಕಾನೂನುಬಾಹಿರ ಎಂದು ನಾಗರತ್ನ ಹೇಳಿದರು.
2016ರಲ್ಲಿ ಮೋದಿ ಸರಕಾರವು ರೂ. 1,000 ಮತ್ತು ರೂ. 500ರ ನೋಟುಗಳನ್ನು ರದ್ದು ಮಾಡಿತ್ತು.
ನೋಟು ರದ್ದನ್ನು ಪ್ರಮಾಣಾನುಗುಣವಾಗಿ ಸರಿಯಲ್ಲ ಎಂದು ಹೇಳಲಾಗದು ಹಾಗೂ ರದ್ದು ಆದ ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿದ 52 ದಿನಗಳ ಕಾಲಾವಕಾಶವನ್ನು ಅವಾಸ್ತವಿಕವೆಂದು ಸಹ ಕೋರ್ಟು ಹೇಳಲಿಕ್ಕಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಒಕ್ಕೂಟ ಸರಕಾರವು ಭಾರತೀಯ ರಿಸರ್ವ್ ಬ್ಯಾಂಕಿನ ಜೊತೆಗೆ ಈ ಸಂಬಂಧ ಆರು ತಿಂಗಳ ಕಾಲ ವಿಚಾರ ವಿನಿಮಯ ಮಾಡಿದ ಬಳಿಕ ತೀರ್ಮಾನ ತೆಗೆದುಕೊಂಡಿತ್ತು ಎಂದು ಐವರು ನ್ಯಾಯಾಧೀಶರ ಪೀಠದ ನಾಲ್ವರು ನ್ಯಾಯಮೂರ್ತಿಗಳು ತೀರ್ಪಿತ್ತರು.
2016ರ ನವೆಂಬರ್ ನಲ್ಲಿ ಕೇಂದ್ರ ಸರಕಾರವು ರೂ. 1,000 ಮತ್ತು ರೂ. 500ರ ನೋಟುಗಳನ್ನು ರದ್ದು ಪಡಿಸಿದ್ದನ್ನು ಪ್ರಶ್ನಿಸಿ 58 ಅರ್ಜಿಗಳು ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದವು. ಒಂದೇ ರಾತ್ರಿಯಲ್ಲಿ ಸರಕಾರವು ಚಲಾವಣೆಯಲ್ಲಿದ್ದ 10 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ರದ್ದು ಪಡಿಸಿತ್ತು.
 ಒಂದು ಮೂರ್ತ ರೂಪದ ಪರಿಹಾರ ಸಾಧ್ಯವಿಲ್ಲವಾದ್ದರಿಂದ ಕೋರ್ಟು ಈ ವಿಷಯವಾಗಿ ತೀರ್ಪು ನೀಡಲಾಗದು. ಇದು ಕಾಲವನ್ನು ಹಿಂದಕ್ಕೆ ಒಯ್ದಂತೆ ಮತ್ತು ಬಡಿದ ಮೊಟ್ಟೆಯನ್ನು ಕೂಡಿಸಿದಂತೆ ಎಂದು ಸರಕಾರದ ಪರ ವಾದಿಸಲಾಯಿತು.
ಅಲ್ಲದೆ ನಕಲಿ ನೋಟು, ಉಗ್ರರಿಗೆ ಧನ ಸಹಾಯ, ಕಪ್ಪು ಹಣ ಮತ್ತು ತೆರಿಗೆ ವಂಚನೆ ತಪ್ಪಿಸಲು ಸರಕಾರವು ತೀವ್ರ ವಿಚಾರಿಸಿದ ಬಳಿಕವೇ ನೋಟು ರದ್ದು ಮಾಡಿದೆ ಎಂದು ಸಹ ಸರಕಾರದ ಪರ ಕೋರ್ಟಿಗೆ ಹೇಳಲಾಯಿತು.
https://pragati.taskdun.com/demonetisation-not-invalid-supreme-court-judgement/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button