ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದ್ದು, ರಾಜ್ಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ, ಪಕ್ಷದ ಹಿತದೃಷ್ಟಿಯಿಂದ ಶೀಘ್ರವೇ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವುದು ಒಳಿತು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಈಗಾಗಲೇ ಹೈಕಮಾಂಡ್ ರಾಜ್ಯಕ್ಕೆ ವೀಕ್ಷಕರನ್ನ ಕಳಿಸಿತ್ತು. ವೀಕ್ಷಕರ ವರದಿ ಆಧಾರದಲ್ಲಿ ಇಂದು ಯಾರನ್ನು ನೇಮಕ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಬಹುದು. ಪಕ್ಷದ ಹಿತದೃಷ್ಟಿಯಿಂದ ಶೀಘ್ರ ನೇಮಕವಾದರೆ ಉತ್ತಮ. ನೇಮಕಾತಿಯಲ್ಲಿ ವಿಳಂಬವಾಗಿರುವುದಕ್ಕೆ ಕಾರಣ ಸೋನಿಯಾ ಗಾಂಧಿಯವರು ದೆಹಲಿ ಚುನಾವಣೆಯಲ್ಲಿ ಬ್ಯುಸಿಯಾಗಿರುವುದು, ಇಂದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಗಾದಿಗೆ ನಾನು ಕೂಡ ಆಕಾಂಕ್ಷಿಯಾಗಿದ್ದು, ಹಲವು ನಾಯಕರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ನಮ್ಮ ಉದ್ದೇಶ ಪಕ್ಷ ಸಂಘಟಿತವಾಗಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂಬುದು ಎಂದು ಹೇಳಿದರು.
ಇನ್ನು ಸಿಎಲ್ಪಿ ಮತ್ತು ಪ್ರತಿಪಕ್ಷ ನಾಯಕ ಸ್ಥಾನವನ್ನು ಹಂಚಿಕೆ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದಲ್ಲಿ ಇಂತಹದೊಂದು ಪ್ರಯತ್ನ ಮಾಡಲಾಗಿದೆ. ಪಕ್ಷದಲ್ಲಿ ಹಲವು ಹಿರಿಯರಿದ್ದಾರೆ. ಎರಡನ್ನೂ ಬೇರೆ ಮಾಡಿದರೆ ತಪ್ಪೇನಿಲ್ಲ. ಅಧಿಕಾರ ಹಂಚಿಕೆಯಾಗಬೇಕು. ಇದರಿಂದ ಮತ್ತೊಬ್ಬರಿಗೂ ಅವಕಾಶ ಸಿಕ್ಕಿದಂತಾಗುತ್ತದೆ. ಇದೇ ಅಭಿಪ್ರಾಯವನ್ನು ನಾನು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಬಳಿ ಕೂಡ ತಿಳಿಸಿದ್ದೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ