
ಪ್ರಗತಿವಾಹಿನಿ ಸುದ್ದಿ: ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು, ಬಳಿಕ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರ ಮನವೊಲಿಕೆ ನಂತರ ನಿರ್ಧಾರದಿಂದ ಹಿಂದೆ ಸರಿದ್ದಾರೆ ಎಂಬ ವಿಚಾರ ಇಂದು ವಿಧಾನಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.
ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪ ಮಾಡುತ್ತಿದ್ದು, ಸಚಿವ ಕೆ.ಜೆಜಾರ್ಜ್ ಅವರ ಗಮನಕ್ಕೂ ತರದೇ ಕೆಲ ಅಧಿಕಾರಿಗಳ ವರ್ಗಾವಣೆ ಮಾಡಿಸಿದ್ದರು. ಯತೀಂದ್ರ ನಡೆಗೆ ಬೇಸತ್ತು ಕೆ.ಜೆ.ಜಾರ್ಜ್ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಕೊಟ್ಟಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಸಚಿವ ಜಾರ್ಜ್ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ನಾನು ರಾಜೀನಾಮೆಯ ಬಗ್ಗೆ ಮಾತುಗಳನ್ನೇ ಆಡಿಲ್ಲ. ಅನಗತ್ಯವಾಗಿ ವಿಷಯ ಪ್ರಸ್ತಾಪಿಸುತ್ತಿದ್ದೀರಿ. ಇದೆಲ್ಲವೂ ಸತ್ಯಕ್ಕೆ ದೂರವಾದದ್ದು. ಮಾಧ್ಯಮಗಳ ಸೃಷ್ಟಿ ಎಂದರು.
ನಾನು ರಾಜೀನಾಮೆ ನೀಡಿಲ್ಲ. ಇಂಧನ ಇಲಾಖೆಯಲ್ಲಿ ಹಸ್ತಕ್ಷೇಪವೂ ಆಗಿಲ್ಲ. ಮಾಧ್ಯಮದವರಿಗೆ ಗಂಟೆಗೊಂದು ಸುದ್ದಿಬೇಕು ಎಂಬ ಕಾರಣಕ್ಕೆ ಅವರೇ ಸೃಷ್ಟಿಸುತ್ತಿದ್ದಾರೆ. ನಾನು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.




