ಕೆ.ಆರ್.ಪ್ರಕಾಶ್ ನಿಧನ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಹಿರಿಯ ರಂಗಕರ್ಮಿ, ನಾಟಕ ಅಕಾಡೆಮಿ ಸದಸ್ಯ, ಪತ್ರಕರ್ತ ಕೆ.ಆರ್.ಪ್ರಕಾಶ್ ನಿಧನರಾಗಿದ್ದಾರೆ. ಅವರಿಗೆ ಸುಮಾರು 52 ವರ್ಷ ವಯಸ್ಸಾಗಿತ್ತು.

ನಾಟಕ ಕ್ಷೇತ್ರದಲ್ಲಿ ಅಪಾರ ಕೆಲಸಮಾಡಿದ್ದ ಪ್ರಕಾಶ್, ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದರು.

ಅಂತರಿಕ್ಷದಲ್ಲಿ, ನೀರಿನಲ್ಲಿ ನಾಟಕಗಳನ್ನು ಮಾಡಿಸಿದ್ದರು. ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು.

ಶಿರಸಿಯಿಂದ ಸಂಯುಕ್ತ ಕರ್ನಾಟಕ ವರದಿಗಾರರಾಗಿಯೂ ಹಲವಾರು ವರ್ಷ ಕೆಲಸ ಮಾಡಿದ್ದರು.

 

ನಿಸರ್ಗ ರಂಗ ಮಿತ್ರ ಪ್ರಕಾಶ್  -ಶಿವಾನಂದ ಕಳವೆ

  ಕೆ ಆರ್ ಪ್ರಕಾಶ್ ಅಂದ್ರೆ ಕ್ರಿಯಾಶೀಲತೆ, ಸುಮ್ಮನೆ ಕುಳಿತ ಆಸಾಮಿ ಅಲ್ಲ.
ನದಿ ದಡದಲ್ಲಿ, ಪ್ರಪಾತದಲ್ಲಿ, ಕೆರೆಯ ಅಂಚಿನಲ್ಲಿ, ಮರದ ನೆರಳಲ್ಲಿ, ಸಮುದ್ರ ತೀರದಲ್ಲಿ  ನಾಟಕ ಮಾಡುವ ಹುಚ್ಚು. ಈ ಕಾರಣಕ್ಕಾಗಿ ಸಂಘಟನಾತ್ಮಕ ಅನುಭವ ಪಡೆದವನು. ಬೀದಿ ನಾಟಕ ಮಾಡುತ್ತಾ ಉತ್ತರ ಕನ್ನಡದ ಕರಾವಳಿ, ವನವಾಸಿ ಕೇರಿ, ಪೇಟೆ ಹಳ್ಳಿಗಳಲ್ಲಿ ಮೂರು ದಶಕಗಳಿಂದ
ಹಕ್ಕಿಮನೆ ಸುರೇಶ, ಬಾಳೆ ಗದ್ದೆ ಶ್ರೀನಿವಾಸ, ರಾಮಕೃಷ್ಣ ಶಾಸ್ತ್ರೀ, ನರಸಿಂಹ ದೀಕ್ಷಿತ ಕಳವೆ ನಾವೆಲ್ಲ ಸೇರಿ ಯುವಜನ ಮೇಳ, ನಾಟಕ ಎಂದು ಸುತ್ತಾಟ. ಸಂಸದರು, ಶಾಸಕರು, ಸಹಕಾರಿ ಧುರೀಣರು ಸೇರಿದಂತೆ ಹಲವರನ್ನು ಬಣ್ಣ ಹಚ್ಚಿಸಿ ನಾಟಕಕ್ಕೆ ಕರೆದವನು. ಪ್ರಕಾಶ್ ಜೊತೆಗೆ ಜೋರು ಚರ್ಚೆ, ವಾದ, ಜಗಳ ಯಾವತ್ತೂ ಇದ್ದದ್ದೇ. ಮುಂಗೋಪಿ, ಮನಸಿಗೆ ಬಂದಿದ್ದು ಮುಲಾಜಿಲ್ಲದೆ ಮಾತಾಡುವ ವ್ಯಕ್ತಿ .
ನಿನ್ನೆ ಸಂಜೆ ಘಟ್ಟಿ ಕೈ ಗೇ ಹೋಗಿದ್ದಾಗ ಸುರೇಶ್ ಹಕ್ಕೀಮನೆ, ದೀಕ್ಷಿತ ಮತ್ತು ನಾನು ಈ ಪ್ರಕಾಶನ ಕತೆಯನ್ನು ಸಹೋದರಿ ಮಾನಸ ಎದುರು ಹೇಳಿಕೊಂಡು ನಕ್ಕಿದ್ದೇವೆ, ನೊಂದು ವಿಷಾದ ವ್ಯಕ್ತಪಡಿಸಿ ಮನೆಗೆ ಮರಳಿದೆವು. ಅದೇ ಕೊನೆ, ತೀವ್ರ  ಅನಾರೋಗ್ಯದಲ್ಲಿ  ಬಳಲುತ್ತಿದ್ದ ಪ್ರಕಾಶ್ ರಾತ್ರಿ ಇಹಲೋಕ ತ್ಯಜಿಸಿದ್ದರು.
ರಂಗ ಚಟುವಟಿಕೆಯನ್ನು ಹಳ್ಳಿಯ ಮೂಲೆಗೆ ಒಯ್ದು ಒಂದು ಕ್ರಿಯಾಶೀಲ ಬದುಕು ನಡೆಸಿದ ಪ್ರಕಾಶ್ ಇನ್ನಿಲ್ಲ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ.
ಕಾಲನ ರಂಗ ಪರದೆ ತೆರೆದಿದೆ, ಒಡನಾಡಿ ಗಳಿಗೆ  ನೋವು ಉಳಿದಿದೆ.

ಅಗಲಿದ ಕೆ.ಆರ್.ಪ್ರಕಾಶ್ ರಿಗೆ ರಂಗನಮನ -ಕಿರಣ ಭಟ್

ಕೆ.ಆರ್.ಪ್ರಕಾಶ ಪ್ರಸ್ತುತ  ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾಗಿದ್ದರು.
ತುಂಬ ಚಿಕ್ಕ ಪ್ರಾಯದಲ್ಲೇ ರಂಗಭೂಮಿಯ ಗೀಳು ಹತ್ತಿಸಿಕೊಂಡಿದ್ದ ಪ್ರಕಾಶ ಉತ್ತಮ ನಟರಾಗಿದ್ದರು.‌ ಅವರದೇ ಆದ ವಿಶಿಷ್ಡ ಶೈಲಿಯಲ್ಲಿ ನಾಟಕಗಳನ್ನ ಕಟ್ಟುತ್ತಿದ್ದರು. ಮುಖ್ಯವಾಗಿ ಹಳ್ಳಿಗಳ ತಂಡಗಳ ಜೊತೆ ನಾಟಕವಾಡುತ್ತ ಶಿರಸಿಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ರಂಗಾಸಕ್ತಿ ಬೆಳೆಯಲು ಕಾರಣರಾಗಿದ್ದರು.
‘ಪ್ರಕೃತಿ ರಂಗಭೂಮಿ’ ಯಲ್ಲಿ ಹಲವಾರು ಸಾಹಸಗಳನ್ನ ಮಾಡಿದ ಪ್ರಕಾಶ್ ನಿಸರ್ಗ ಮತ್ತು ರಂಗಭೂಮಿಗಳು ಲೀನವಾಗಬಹುದಾದ  ಸಾಧ್ಯತೆಗಳ ಕುರಿತು ಯೋಚಿಸುತ್ತಿದ್ದರು. ಹಾಗೆಯೇ ಸಮುದ್ರ ದಡದಲ್ಲಿ, ಜಲಪಾತದೆದುರು, ಪ್ರಪಾತದಲ್ಲಿ ಹೀಗೆ ಹಲವಾರು ಪ್ರಯೋಗಗಳನ್ನು ಮಾಡಿದ್ದರು. ಮತ್ತಿಘಟ್ಟದ ಗೆಳೆಯರೊಡನೆ ಅವರು ಮಾಡಿದ ಪ್ರಯೋಗಗಳು ಅನೇಕ.
ಪ್ರಕಾಶ್ ಹೆಸರಲ್ಲಿ ಪ್ರಶಸ್ತಿಯೂ ಕೊಡಮಾಡಲ್ಪಡುತ್ತಿತ್ತು. ರಂಗಭೂಮಿಯ ಅನೇಕ ಹಿರಿಯರು ಪ್ರಶಸ್ತಿ ಸ್ವೀಕರಿಸಿದ್ದರು.
ಶಿರಸಿಯ ‘ರಂಗಸಂಗ’ ಕ್ಕಾಗಿಯೂ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದರು.
ಇನ್ನೂ ಹಲವು ವರ್ಷ ರಂಗಕಾಯಕ ಮಾಡಬಹುದಾಗಿದ್ದ ಪ್ರಕಾಶ್ ಅನಾರೋಗ್ಯ ದಿಂದ ಹಠಾತ್ ನಿರ್ಗಮಿಸದ್ದಾರೆ.
ಅವರಿಗೆ ನಮನಗಳು.
‘ಚಿಂತನ ರಂಗ ಅಧ್ಯಯನ ಕೇಂದ್ರ’ ಮತ್ತು ‘ ಚಿಂತನ ಉತ್ತರ ಕನ್ನಡ’, ಕೆ. ಆರ್ ಪ್ರಕಾಶ್ ರಿಗೆ ಗೌರವಗಳನ್ನು ಸಲ್ಲಿಸುತ್ತವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button