Latest

*ಮಂತ್ರಿಗಿರಿಗಾಗಿ ಸಿಎಂ ಗೆ ಗಡುವು ನೀಡಿದ ಕೆ.ಎಸ್.ಈಶ್ವರಪ್ಪ; ಕುತೂಹಲ ಮೂಡಿಸಿದ ಮುಂದಿನ ನಡೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪರೋಕ್ಷವಾಗಿ ಗಡುವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್.ಈಶ್ವರಪ್ಪ, ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗಾಗಿ ದುಡಿದಿದ್ದೇನೆ. 30-40 ವರ್ಷಗಳಿಂದ ಪಕ್ಶವನ್ನು ಕಟ್ಟಿ ಬೆಳೆಸಿದ್ದೇನೆ. ಯಡಿಯೂರಪ್ಪ, ಅನಂತಕುಮಾರ್ ಜೊತೆ ರಾಜ್ಯಾದ್ಯಂತ ಒಡಾಟ ನಡೆಸಿದ್ದೇನೆ. ಎಲ್ಲರ ಶ್ರಮದಿಂದ ಬಿಜೆಪಿ ಬಲಶಾಲಿಯಾಗಿ ಬೆಳೆದಿದೆ. ಎಲ್ಲಾ ನಾಯಕರಿಗೂ ಪಕ್ಷದಿಂದ ಪ್ರತಿಫಲ ಸಿಕ್ಕಿದೆ ಎಂದರು.

ನನ್ನ ಮೇಲೆ ನಿರಾಧಾರ ಆರೋಪ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಹಿಂದೆ ಕೆ.ಜೆ ಜಾರ್ಜ್ ಮೇಲೆ ಆರೋಪ ಬಂದಾಗ ವಿಪಕ್ಷನಾಯಕನಾಗಿದ್ದ ನಾನು ರಾಜೀನಾಮೆಗೆ ಆಗ್ರಹಿಸಿದ್ದೆ. ಆರೋಪ ಮುಕ್ತರಾದರೆ ಮತ್ತೆ ಸಚಿವರಾಗಿ ಎಂದು ಹೇಳಿದ್ದೆ. ಅದರಂತೆ ನನ್ನ ವಿರುದ್ಧ ಆರೋಪ ಕೇಳಿಬಂದಾಗ ವರಿಷ್ಠರ ಗಮನಕ್ಕೆ ತಂದು ರಾಜೀನಾಮೆ ನೀಡಿದ್ದೇನೆ. ವರಿಷ್ಠರು ರಾಜೀನಾಮೆ ಕೊಡುವುದು ಬೇಡ ಎಂದಿದ್ದರು. ಆದರೂ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ನೀಡಿದ್ದೆ. ಪ್ರಕರಣದಲ್ಲಿ ಕ್ಲೀನ್ ಚಿಟ್ ಬಂದು 4 ತಿಂಗಳಾಯ್ತು . ಆದರೆ ಈವರೆಗೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ, ವಿಳಂಬವಾಗುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪ, ಜಾರಕಿಹೊಳಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು. ಆಗ ಸಮಾಧಾನವಾಗಿತ್ತು. ಆದರೆ ಈವರೆಗೂ ಸಂಪುಟಕ್ಕೆ ಸೇರಿಸಿಕೊಂದಿಲ್ಲ. ಆದಷ್ಟು ಬೇಗ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಸಿಎಂ ಹಾಗೂ ವರಿಸ್ಠರಿಗೆ ಒತ್ತಾಯಿಸುತ್ತೇನೆ ಎಂದರು.

ಗುಂಪು ಆಗುವುದು ಬೇಡ ಎಂಬ ಕಾರಣಕ್ಕೆ ಇಷ್ಟು ದಿನ ಸುಮ್ಮನಿದ್ದೆ. ಸೌಮ್ಯ ಪ್ರತಿಭಟನೆ ಮಾಡಿದ್ದೆ. ಈ ನಿಟ್ಟಿನಲ್ಲಿ ಸ್ಪೀಕರ್ ಕಾಗೇರಿಯವರಿಗೂ ಪತ್ರ ಬರೆದಿದ್ದೆ. ಅವರು ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದಾರೆ. ಇಂದು ಸಂಜೆ ನಾನು ಮತ್ತೊಮ್ಮೆ ಸಿಎಂ ಬೊಮ್ಮಾಯಿ ಬಳಿ ಮಾತನಾಡುತ್ತೇನೆ. ನಾನು ಸಿಎಂ ಅವರನ್ನು ನಂಬುತ್ತೇನೆ. ಅವರ ಮೇಲೆ ವಿಶ್ವಾಸವಿದೆ. ಇಂದು ಸಂಜೆ ಸಿಎಂ ಜೊತೆ ಮಾತನಾಡಿದ ಬಳಿಕ ಮುಂದಿನ ನಿರ್ಧಾರ ಹೇಳುತ್ತೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಿಎಂ ಬೊಮ್ಮಾಯಿ ಅವರಿಗೆ ಪರೋಕ್ಷ ಗಡುವು ನೀಡಿರುವ ಈಶ್ವರಪ್ಪ ಸಂಜೆ ವೇಳೆಗೆ ಹೊಸ ಬಾಂಬ್ ಸಿಡಿಸಲಿದ್ದಾರಾ? ಈಶ್ವರಪ್ಪ ಮುಂದಿನ ನಡೆ ಏನು ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

*ಒಂದೇ ಕುಟುಂಬದ ಮೂವರು ಆತ್ಮಹತ್ಯೆ*

https://pragati.taskdun.com/3-membersuicideone-familybangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button