Latest

ಆಶಾ ಕಾರ್ಯಕರ್ತೆಗೆ ಖಾರದಪುಡಿ ಎರಚಿ, ಹಲ್ಲೆ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ನಡುವೆ ಕೊರೊನಾ ನಿಯಂತ್ರಣಕ್ಕಾಗಿ ಕೊರೊನಾ ವಾರಿಯರ್ಸ್ ಹಗಲಿರುಳು ದುಡಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಕರ್ತವ್ಯ ನಿರತ ಆಶಾ ಕಾರ್ಯಕರ್ತೆ ಮೇಲೆ ಕಾರದಪುಡಿ ಎರಚಿ, ರಾಡ್​ನಿಂದ ಹಲ್ಲೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.

ಚಿತ್ತಾಪುರ ತಾಲೂಕಿನ ಶಾಂಪುರದಹಳ್ಳಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಹಾಗೂ ಆಕೆಯ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಜ್ಯೋತಿ ಪವಾರ್ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯಾಗಿದ್ದಾಳೆ. ಕೊರೊನಾ ಸೋಂಕಿತ ಕುಟುಂಬದ ಮಾಹಿತಿ ಪಡೆಯಲು ಹೋಗಿದ್ದಾಗ ಈ ಘಟನೆ ನಡೆದಿದೆ.

ಗ್ರಾಮದಲ್ಲಿ ಕ್ವಾರಂಟೈನ್​​ನಲ್ಲಿದ್ದ ಮೂವರಿಗೆ ಪಾಸಿಟಿವ್ ಬಂದಿತ್ತು. ನಂತರದಲ್ಲಿ ಮತ್ತೆ ಮೂವರಿಗೆ ಪಾಸಿಟಿವ್ ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಐಸೋಲೇಷನ್ ವಾರ್ಡ್​ಗೆ ಕರೆದೊಯ್ಯಲಾಗಿತ್ತು. ಇದಾದ ನಂತರ ಮೇಲಧಿಕಾರಿಗಳ ಸೂಚನೆ ಮೇರೆಗೆ ಆಶಾ ಕಾರ್ಯಕರ್ತೆ ಜ್ಯೋತಿ, ಮಾಹಿತಿ ಸಂಗ್ರಹಿಸಲು ಮನೆಗಳಿಗೆ ತೆರಳಿದ್ದಳು. ನಮ್ಮ ಕುಟುಂಬದ ಸದಸ್ಯರನ್ನು ಉದ್ದೇಶಪೂರ್ವಕವಾಗಿಯೇ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೀರಿ ಎಂದು ಸೋಂಕಿತರ ಕುಟುಂಬದ ಸದಸ್ಯರು ಆಶಾ ಕಾರ್ಯಕರ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆಶಾ ಕಾರ್ಯಕರ್ತೆಗೆ ರಾಡ್​ನಿಂದ ಹೊಡೆಯಲು ಹೋದಾಗ ಅದನ್ನು ತಡೆಯಲು ಹೋದ ಆಕೆಯ ಪತಿ ತಾರಾಸಿಂಗ್​​ಗೆ ರಾಡ್ ತಗುಲಿ ಕಾಲಿಗೆ ಗಾಯಗಳಾಗಿವೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button