*ಕೆಬಿಎಸ್ ಬ್ಯಾಂಕ್ ನಲ್ಲಿ ಗೋಲ್ ಮಾಲ್*: *ನಕಲಿ ಚಿನ್ನಾಭರಣ ಅಡವಿಟ್ಟು 76 ಲಕ್ಷ ಸಾಲ ಪಡೆದು ವಂಚನೆ*

ಪ್ರಗತಿವಾಹಿನಿ ಸುದ್ದಿ: ಕೃಷ್ಣಾ ಸಮೃದ್ಧಿ (ಕೆಬಿಎಸ್) ಬ್ಯಾಂಕಿನಲ್ಲಿ ಬರೋಬ್ಬರಿ 700 ಗ್ರಾಂ ಗೂ ಅಧಿಕ ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬ್ಯಾಂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲಿ ಚಿನ್ನ ಪತ್ತೆಯಾಗಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ತಾವು ಅಸಲಿ ಚಿನ್ನವಿಟ್ಟು ಸಾಲ ಪಡೆದ ಪ್ರಾಮಾಣಿಕ ಗ್ರಾಹಕರು ಸಹ ತಮ್ಮ ಒಡವೆಗಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ನೇರ ಶಾಮೀಲಾತಿ ಇಲ್ಲದೆ ಇಂತಹ ದೊಡ್ಡ ಪ್ರಮಾಣದ ವಂಚನೆ ನಡೆಸುವುದು ಸಾರ್ವಜನಿಕರಿಗೆ ಅಸಾಧ್ಯವೆಂದು ತೋರುತ್ತದೆ. ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಆಡಿಟ್ ವೇಳೆ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಕಲಬುರಗಿ ಜಿಲ್ಲೆಯ ಸುಪರ್ ಮಾರ್ಕೆಟ್ನಲ್ಲಿರುವ ಕೃಷ್ಣಾ ಸಮೃದ್ಧಿ (ಕೆಬಿಎಸ್) ಬ್ಯಾಂಕಿನಲ್ಲಿ ಈ ಬೃಹತ್ ಗೋಲ್ ಮಾಲ್ ನಡೆದಿದೆ. ನಕಲಿ ಚಿನ್ನ ಅಡವಿಟ್ಟು ಅಂದಾಜು 76 ಲಕ್ಷ ರೂಪಾಯಿಗಳಿಗೂ ಹೆಚ್ಚು ಸಾಲ ಪಡೆದು ವಂಚಿಸಲಾಗಿದೆ. ಈ ಗಂಭೀರ ಅಕ್ರಮದ ಕುರಿತು ಬ್ಯಾಂಕ್ ಮ್ಯಾನೇಜರ್ ಹರ್ಷಾ ಕುಲಕರ್ಣಿ ಅವರು ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕಿನ ಹಳೆ ಮ್ಯಾನೇಜರ್ ಹಾಗೂ ಚಿನ್ನಾಭರಣ ಪರಿಶೀಲನೆ ನಡೆಸುತ್ತಿದ್ದ ಅಕ್ಕಸಾಲಿಗನ ವಿರುದ್ಧ ದೂರು ನೀಡಲಾಗಿದ್ದು, ಈ ಗೋಲ್ಮಾಲ್ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸಿರುವ ಶಂಕೆ ವ್ಯಕ್ತವಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ, ದೂರು ನೀಡಿರುವ ಪ್ರಸ್ತುತ ಮ್ಯಾನೇಜರ್ ಹರ್ಷಾ ಕುಲಕರ್ಣಿ ಅವರ ಮೇಲೆಯೂ ಕೆಲವು ಗಂಭೀರ ಆರೋಪಗಳಿವೆ. ಅವರು ಈ ಹಿಂದೆ ಕಮಲಾಪುರ ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗ ಬರೋಬ್ಬರಿ 84 ಲಕ್ಷ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ನಕಲಿ ಚಿನ್ನದ ಈ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದು, ಕಮಲಾಪುರ ಪ್ರಕರಣದ ನಂಟಿನ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




