Film & EntertainmentKannada NewsKarnataka NewsNationalPolitics

*ಅಧಿಕಾರದಲ್ಲಿರುವ ಬಿಜೆಪಿ ಶತ್ರುಗಳನ್ನು ಸೃಷ್ಟಿಸುತ್ತಿದೆ*: *ಮೋದಿ ಸರ್ಕಾರದ ವಿರುದ್ಧ ಅಣ್ಣಾಮಲೈ ವಾಗ್ದಾಳಿ *

ಪ್ರಗತಿವಾಹಿನಿ ಸುದ್ದಿ: ಕೇಂದ್ರದ ಮೋದಿ ಸರ್ಕಾರದ ವಿರುದ್ಧ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಕಾಕ್ರೋಚ್ ಜನತಾ ಪಕ್ಷದ ನಾಯಕರ ವಿರುದ್ಧ ಕೈಗೊಂಡ ಕ್ರಮವನ್ನು ಟೀಕಿಸಿರುವ ಅಣ್ಣಾಮಲೈ, ಅಧಿಕಾರದಲ್ಲಿರುವ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೊಸ ಶತ್ರುಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರದಲ್ಲಿ 12 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ, ತಾನು ಅಧಿಕಾರದಲ್ಲಿರುವ ಪಕ್ಷ ಎಂಬುದನ್ನೇ ಮರೆತಂತಿದೆ. ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಸದಾ ಹೊಸ ಶತ್ರುಗಳನ್ನು ಸೃಷ್ಟಿಸಬೇಕೆಂದು ಭಾವಿಸಿದಂತಿದೆ ಎಂದು ಅಣ್ಣಾಮಲೈ ಟೀಕಿಸಿದ್ದಾರೆ.

2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯ ವೇಳೆ ಅಂದಿನ ಸರ್ಕಾರ ಪೊಲೀಸ್ ಕ್ರಮ ಕೈಗೊಂಡಿದ್ದನ್ನು ಅವರು ಸ್ಮರಿಸಿದ್ದಾರೆ. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ತಮ್ಮ ಕೈಗಳನ್ನು ಕಟ್ಟಿಹಾಕಿರದಿದ್ದರೆ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೆ ಎಂದು ಹೇಳಿದ್ದರು. ಅಂದು ಮೋದಿ ಹೇಳಿದ್ದ ಮಾತು ಸರಿಯಾಗಿತ್ತು. ಆದರೆ, ಇಂದು ಪ್ರತಿಭಟನೆ ನಡೆಸುವವರು ಅನಿರ್ದಿಷ್ಟಾವಧಿಯವರೆಗೆ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಮೀನು ಬಾಂಡ್‌ಗಳು ತಿರಸ್ಕೃತವಾಗುತ್ತಿವೆ, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳ ಮುಂದೆ ಅಲೆದಾಡುವಂತಾಗಿದೆ ಎಂದು ಅಣ್ಣಾಮಲೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಕಾನೂನು ಪ್ರಕ್ರಿಯೆಗಳ ಉಲ್ಲಂಘನೆಯನ್ನು ಪ್ರಶ್ನಿಸುವ ಹಕ್ಕು ಕೂಡ ಇಲ್ಲದಂತಾಗಿದೆ ಎಂದು ಟೀಕಿಸಿರುವ ಅಣ್ಣಾಮಲೈ, ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿದರೆ ಅವಹೇಳನಕಾರಿ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಕೊನೆಗೆ ವಿದೇಶಿ ಏಜೆಂಟ್ ಎಂಬ ಹಣೆಪಟ್ಟಿಯನ್ನೂ ಕಟ್ಟಲಾಗುತ್ತದೆ ಎಂದು ಹೇಳಿದ್ದಾರೆ.

ಕಾಕ್ರೋಚ್ ಜನತಾ ಪಕ್ಷದ ನಾಯಕರ ವಿರುದ್ಧದ ಕ್ರಮದ ವಿಚಾರದಲ್ಲೂ ಬಿಜೆಪಿಯ ಉದ್ದೇಶವನ್ನು ಅಣ್ಣಾಮಲೈ ಪ್ರಶ್ನಿಸಿದ್ದಾರೆ. ಬಿಜೆಪಿ ಸಿಜೆಪಿಯನ್ನು ವಿರೋಧಿಸುತ್ತಿದೆಯೋ ಅಥವಾ ಅದಕ್ಕೆ ಅನಗತ್ಯ ಪ್ರಚಾರ ನೀಡುತ್ತಿದೆಯೋ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಜೆಪಿಯನ್ನು ದೊಡ್ಡ ರಾಜಕೀಯ ಶಕ್ತಿಯಂತೆ ಬಿಂಬಿಸಿ ವಿರೋಧ ಪಕ್ಷಗಳ ಮತಗಳನ್ನು ವಿಭಜಿಸುವ ಉದ್ದೇಶವಿದೆಯೇ ಎಂದೂ ಪ್ರಶ್ನಿಸಿದ್ದಾರೆ. ಸಿಜೆಪಿಯೇ ಹಣ ನೀಡಿ ಪ್ರಚಾರ ತಂಡವನ್ನು ನೇಮಿಸಿದ್ದರೂ ಇಷ್ಟೊಂದು ಪ್ರಚಾರ ಸಿಗುತ್ತಿರಲಿಲ್ಲವೇನೋ ಎಂದು ವ್ಯಂಗ್ಯವಾಡಿದ್ದಾರೆ.

ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಗಳ ಬಗ್ಗೆಯೂ ಅಣ್ಣಾಮಲೈ ಮಾತನಾಡಿದ್ದಾರೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿದೆ. ಭಾರತೀಯರು ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರದ ಬಳಿ ತನಿಖಾ ಸಂಸ್ಥೆಗಳು ಮತ್ತು ರಾಜತಾಂತ್ರಿಕ ಸಂಪನ್ಮೂಲಗಳಿವೆ. ಹೀಗಿರುವಾಗ, ಸರ್ಕಾರದ ವಿರುದ್ಧ ನಡೆಯುವ ಪ್ರತಿಯೊಂದು ಪ್ರತಿಭಟನೆಯ ಹಿಂದೆಯೂ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

12 ವರ್ಷಗಳಿಗೂ ಹೆಚ್ಚು ಕಾಲ ಆಡಳಿತ ನಡೆಸುತ್ತಿರುವ ಸರ್ಕಾರ ತನ್ನ ವಿರುದ್ಧದ ಟೀಕೆಗಳಿಗೆ ವಸ್ತುನಿಷ್ಠವಾಗಿ ಉತ್ತರಿಸಬೇಕು. ಅಧಿಕಾರ ಉಳಿಸಿಕೊಳ್ಳಲು ವಿರೋಧಿಗಳನ್ನು ಶತ್ರುಗಳಂತೆ ಬಿಂಬಿಸುವುದು ಮತ್ತು ಕೃತಕ ಶತ್ರುಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದು ಕೆ. ಅಣ್ಣಾಮಲೈ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧವೇ ಬಿಜೆಪಿ ಮಾಜಿ ಅಧ್ಯಕ್ಷರು ಈ ರೀತಿಯ ಟೀಕೆಗಳನ್ನು ಮಾಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button