*ಸಿಮೆಂಟ್ ಫ್ಯಾಕ್ಟರಿಯಲ್ಲಿ ಮತ್ತೋರ್ವ ಸಾವು; 2 ತಿಂಗಳಲ್ಲಿ ನಾಲ್ಕು ಜನರು ದುರ್ಮರಣ; ತಿರುಗಿ ನೋಡದ ಜನಪ್ರತಿನಿಧಿಗಳು*
ಪ್ರಗತಿವಾಹಿನಿ ಸುದ್ದಿ: ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಇಂದು ಮತ್ತೋರ್ವ ಕಾರ್ಮಿಕ ಬಲಿಯಾಗಿದ್ದಾನೆ. ಈ ಮೂಲಕ ಈ ಕಾರ್ಖಾನೆಯಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರತ್ತ ತಿರುಗಿಯೂ ನೋಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಇಂದು 26 ವರ್ಷದ ಕಾರ್ಮಿಕ ಸಾವನ್ನಪ್ಪಿದ್ದಾನೆ. ಜಾರ್ಖಂಡ್ ಮೂಲದ ರಾಜಕುಮಾರ ಮೃತ ದುರ್ದೈವಿ. ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದಿರುವುದೇ ಕಾರ್ಮಿಕರ ಸಾವಿಗೆ ಕಾರಣ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಬೆನಕನಹಳ್ಳಿ ನಿವಾಸಿ ಇಂದ್ರಕುಮಾರ್ ಎಂಬಾತ ಇದೇ ಫ್ಯಾಕ್ಟರಿಯಲ್ಲಿ ಮೃತಪಟ್ಟಿದ್ದರು. ಕಳೆದ ಎರಡು ತಿಂಗಳಲ್ಲಿ ಇದೇ ಸಿಮೆಂಟ್ ಫ್ಯಾಕ್ಟರಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಅವರಲ್ಲಿ ಇಬ್ಬರು ಸೇಡಂ ಮೂಲದವರೇ ಆಗಿದ್ದಾರೆ. ಆದಾಗ್ಯೂ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿಲ್ಲ. ಕಾರ್ಖಾನೆಯಲ್ಲಿ ಸುರಕ್ಷಿತ ಕ್ರಮಗಳ ಬಗ್ಗೆ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ