ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೊರೊನಾ ವಾರಿಯರ್ಸ್ ಗೂ ಸೋಂಕು ತಗುಲುತ್ತಿದೆ. ಈಗಾಗಲೇ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಲ್ಯಾಬ್ ಟೆಕ್ನಿಷಿಯನ್ಸ್, ಪೊಲೀಸ್ ಅಧಿಕಾರಿಗಳು, ಹೋಮ್ ಗಾರ್ಡ್ಸ್ ಗಳು ಸೇರಿದಂತೆ ಹಲವರು ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ಕಲಬುರ್ಗಿ ನಗರದಲ್ಲಿ ಮತ್ತೆ ಮೂವರು ಪೊಲೀಸರಿಗೆ ಸೋಂಕು ವಕ್ಕರಿಸಿದೆ. ಜೊತೆಗೆ ಇಬ್ಬರು ಹೋಮ್ ಗಾರ್ಡ್ ಗಳಿಗೂ ಕೊರೋನಾ ದೃಢಪಟ್ಟಿದೆ.
ಈಗಾಗಲೇ ಕಲಬುರ್ಗಿಯ ವಿವಿಧ ಠಾಣೆಗಳಲ್ಲಿ ರಾಂಡಮ್ ಆಗಿ ನಡೆಸಿದ ಪರೀಕ್ಷೆ ವೇಳೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ನಗರದ ಸ್ಟೇಷನ್ ಬಜಾರ್, ಬ್ರಹ್ಮಪುರ ಠಾಣೆಯ ಪೊಲೀಸ್ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಎರಡು ಠಾಣೆಯ ಇನ್ನಿತರ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕಿನ ಭೀತಿ ಶುರುವಾಗಿದೆ.
ಕಲಬುರಗಿಯಲ್ಲಿ ಈ ಹಿಂದೆ ಎಂಟು ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿತ್ತು. ಇಬ್ಬರು ಕೆ.ಎಸ್.ಆರ್.ಪಿ. ಕಾನ್ಸ್ಟೇಬಲ್ಗೂ ಸೋಂಕು ದೃಢಪಟ್ಟಿತ್ತು.
ಮತ್ತೊಂದೆಡೆ ಕಲಬುರ್ಗಿ ಜಿಲ್ಲೆಯಲ್ಲಿ ವೈದ್ಯ ದಂಪತಿ ಸೇರಿದಂತೆ ಐವರು ವೈದ್ಯರಿಗೆ ಸೋಂಕು ದೃಢಪಟ್ಟಿದೆ. ವೈದ್ಯರಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಆಸ್ಪತ್ರೆಯ ಓಪಿಡಿ ಬಂದ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ