*ಕಲ್ಲೊಳಿಯಲ್ಲಿ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಕೇಂದ್ರ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ದುಡ್ಡು ಕೊಟ್ಟು ಜಗತ್ತಿನಲ್ಲಿ ಏನೆಲ್ಲ ಕೊಳ್ಳಬಹುದು. ಆದರೆ ನೆಮ್ಮದಿಯನ್ನು ಮಾತ್ರ ಕೊಳ್ಳಲು ಸಾಧ್ಯವಿಲ್ಲ ಅಂತಹ ನೆಮ್ಮದಿ ದೊರೆಯುವ ಏಕೈಕ ಮಾರ್ಗವೆಂದರೇ ಧ್ಯಾನ. ಆಧುನಿಕ ಯುಗದಲ್ಲಿ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಕೇಂದ್ರಗಳು ಮನುಷ್ಯನ ನೆಮ್ಮದಿಯ ಕೇಂದ್ರಗಳಾಗಲಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಶ್ರೀ ಮಲ್ಲಯ್ಯಾ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಕೇಂದ್ರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಪಿರಮಿಡ್ ತುದಿ ಆಕಾಶವನ್ನು ಸೂಚಿಸಿದರೆ ಆ ಪಿರಮಿಡ್‌ನ ಸ್ಥಳ ಭೂಮಿ ಹಾಗೂ ಜಲ ಸೂಚಕವಾಗಿದೆ. ಪಿರಮಿಡ್ ತುತ್ತ ತುದಿಯ ತ್ರಿಕೋಣದ ಮಧ್ಯ ಬಿಂದು ಅಗ್ನಿ ತತ್ವದ ಕೇಂದ್ರವಾಗಿದ್ದು ಜಗತ್ತಿನ ಎಲ್ಲ ಶಕ್ತಿಗಳು ಈ ಮೂಲಕ ಧ್ಯಾನಾಸಕ್ತನಾದ ವ್ಯಕ್ತಿಯನ್ನು ಸಂಪರ್ಕಿಸಿ ಚೈತನ್ಯ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.
ಭಾರತದ ಜನ ಮಠ ಮಂದಿರಗಳಲ್ಲಿ ಧ್ಯಾನ ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ಕಂಡಕೊಳ್ಳುತ್ತಿದ್ದರು. ಆ ರೀತಿಯಾದ ಪಿರಮಿಡ್ ಧ್ಯಾನ ಕೇಂದ್ರಗಳು ಕೂಡಾ ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ಹೇಳಿದರು.
ಕಲ್ಲೋಳಿ ಪಟ್ಟಣ ಎಲ್ಲಾ ಕ್ಷೇತ್ರಗಳಲ್ಲಿಯೂ ಹೊಸ ಹೊಸ ಆವಿಷ್ಕಾರಗಳಿಗೆ ಸಾಕ್ಷಿಯಾದ ಕೇಂದ್ರವಾಗಿದೆ. ಆಧ್ಯಾತ್ಮಿಕ, ಉದ್ಯಮ, ಕೃಷಿ, ಶಿಕ್ಷಣ, ಸಹಕಾರ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಹೊಸ ಪ್ರಯೋಗಗಳು ಕಲ್ಲೋಳಿಯಲ್ಲಿ ನಡೆಯುತ್ತಿವೆ ಎಂದರಲ್ಲದೇ ಮಾಜಿ ಸೈನಿಕ ಮಲ್ಲಪ್ಪ ಕಂಕಣವಾಡಿ ಅವರು ದೇಶ ಸೇವೆ ಮಾಡಿ ಈಗ ಸಮಾಜದ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಕೇಂದ್ರದ ಮೂಲಕ ಈಗ ಈಶ ಸೇವೆ ಮಾಡಲು ಹೊರಟ್ಟಿದ್ದಾರೆ. ಈ ಕಾರ್ಯವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ರಹ್ಮರ್ಷಿ ಪ್ರೇಮನಾಥ, ಪೂಜ್ಯ ಶ್ರೀ ಅಭಿನವ ಬ್ರಹ್ಮಾನಂದ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸುರೇಶ ಎ.ಜಿ, ಮಾಜಿ ಸೈನಿಕ ಮಲ್ಲಪ್ಪ ಕಂಕಣವಾಡಿ ಮತ್ತು ದಂಪತಿಗಳು, ಪಿರಮಿಡ್ ಮಾಸ್ಟರ್‌ಗಳಾದ ಕೋಟೆಶ್ವರ ರಾವ್, ಟಿ ಹರಿಶಂಕರ, ಕುಮಾರಿ ವಿಶಾಲಾಕ್ಷಿ, ಉದಯ ಕರಜಗಿಮಠ, ಲಲಿತಾ ವಗ್ಗಾ, ಸುರೇಶ ಕಲಬುರ್ಗಿ, ವಿರೂಪಾಕ್ಷಿ ಮಠದ ಸೇರಿದಂತೆ ಮಾಜಿ ಸೈನಿಕರ ಸಂಘಟನೆ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸವಿತಾ ಕಂಕಣವಾಡಿ ಸ್ವಾಗತಿಸಿದರು. ಪರಪ್ಪ ಮುತ್ನಾಳ ವಂದಿಸಿದರು. ಮಲ್ಲಿಕಾರ್ಜುನ ಕರಜಗಿಮಠ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ