ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಿ – ಅಣ್ಣಾಸಾಹೇಬ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಭೀಕರ ಕೊಲೆ ಮಾಡಿದ ದುರುಳರಿಗೆ ಕಠಿಣ ಶಿಕ್ಷೆ ಆಗಬೇಕು. ಜೈನಮುನಿ ಹತ್ಯೆ ಪ್ರಕರಣ ಸಮಗ್ರ ತನಿಖೆ ನಡೆಸಲು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಒತ್ತಾಯಿಸಿದರು.
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮಕ್ಕೆ ಭೇಟಿ ನೀಡಿ ಜೈನಮುನಿ ಕಾಮಕುಮಾರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಟ್ರಷ್ಟ ಕಮೀಟಿ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಗಡಿ ಭಾಗದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುವ ಜೈನಮುನಿ ಹತ್ಯೆಯಿಂದ ತೀವ್ರ ಆಘಾತವುಂಟು ಮಾಡಿದೆ. ಧರ್ಮ ಗುರುಗಳಿಗೆ ಇಂತಹ ಕೃತ್ಯ ನಡೆಯಬಾರದು. ಇದರಲ್ಲಿ ಯಾರೇ ತಪ್ಪು ಮಾಡಿದರೂ ಅಂತವರನ್ನು ತನಿಖೆ ಮಾಡಿ ಕಠಿಣ ಶಿಕ್ಷೆ ಕೊಡಬೇಕು ಎಂದ ಅವರು, ಜೈನಮುನಿ ಹತ್ಯೆ ಪ್ರಕರಣದಲ್ಲಿ ರಾಜ್ಯದ ಪೊಲೀಸ್‌ರು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೂ ಸತ್ಯಾಸತ್ಯೆತೆ ತನಿಖೆಗೆ ಸಿಬಿಐಗೆ ವಹಿಸುವುದು ಸೂಕ್ತವಾಗಿದೆ ಎಂದರು.
ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕನಸಿನಂತೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಮರಳಿ ಆರಂಭ ಮಾಡುವ ಕುರಿತು ಟ್ರಷ್ಟ ಮತ್ತು ಗ್ರಾಮದ ಮುಖಂಡರ ಜೊತೆ ಚರ್ಚೆ ನಡೆಸಿ ಕನಸ್ಸನ್ನು ನನಸು ಮಾಡಲು ಬಿಜೆಪಿ ಮತ್ತು ನಾವು ಸದಾ ಪ್ರಯತ್ನ ಮಾಡುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಧಾರ್ಮಿಕ ಜೊತೆಗೆ ಸಾಮಾಜಿಕ ಕಾರ್ಯ ಮಾಡುತ್ತಿರುವ ಕಾಮಕುಮಾರ ನಂದಿ ಮಹಾರಾಜರ ಕೀರ್ತಿ ದೊಡ್ಡದಿದೆ ಎಂದು ಬಣ್ಣಿಸಿದರು.
ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಜೈನಮುನಿ ಹತ್ಯೆ ಇದೊಂದು ಹೇಯ ಕೃತ್ಯವಾಗಿದೆ. ಸಮಾಜದ ಸುಧಾರಣೆಗೆ ಬಂದು ಆಶ್ರಮ ಕಟ್ಟಿ ಮಕ್ಕಳಿಗೆ ಶಿಕ್ಷಣ ಕೊಡುವ ಸ್ವಾಮೀಜಿಗಳನ್ನು ಬರ್ಬರವಾಗಿ ಹತ್ಯೆ ಮಾಡುವುದು ಯಾವ ನ್ಯಾಯ. ಈ ಪ್ರಕರಣದ ಪ್ರತಿಯೊಂದು ಕೂರುಹು ಹೊರಬರಬೇಕಾದರೆ ಸಿಬಿಐ ತನಿಖೆಯಿಂದ ಮಾತ್ರ ಸಾಧ್ಯ ಇದೆ ಎಂದರು.
ಜೈನಮುನಿಗಳ ಪೂರ್ವಾಶ್ರಮದ ಸಂಬಂಧಿಕರು ಮತ್ತು ಗ್ರಾಮಸ್ಥರ ಜೊತೆ ಈರಣ್ಣಾ ಕಡಾಡಿ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರತ್ಯೇಕ ಭೇಟಿ ನೀಡಿ ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ನೇರವಾಗಿ ಪೊಲೀಸ್‌ರಿಗೆ ತಿಳಿಸಬೇಕು. ಇಲ್ಲದೇ ಹೋದರೆ ನಮಗೆ ತಿಳಿಸಿ ನಾವು ಪೊಲೀಸ್‌ರಿಗೆ ಮಾಹಿತಿ ಕೊಡುತ್ತೇವೆ. ಯಾವುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಥಣಿ ಮಾಜಿ ಶಾಸಕ ಮಹೇಶ ಕುಮಟ್ಟೊಳ್ಳಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೊಳ, ಮಂಡಲ ಅಧ್ಯಕ್ಷ ಸಂಜಯ ಪಾಟೀಲ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ