Kannada NewsKarnataka NewsLatest

ಖಾನಾಪುರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ

https://www.youtube.com/watch?v=K5iMExUp8as

https://www.youtube.com/watch?v=wTkU8agY7ks

 ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರದಲ್ಲಿ ಹಳೆಯ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಕನ್ನಡ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ೬೪ ನೇ ಕನ್ನಡ ರಾಜ್ಯೋತ್ಸವದ ಮೆರವಣಿಗೆಗೆ  ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಚಾಲನೆ ನೀಡಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಜಾಭಜಂತ್ರಿ ಸಹಿತ ವಿವಿಧ ವಾದ್ಯಮೇಳಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಶಾಸಕರಾದಿಯಾಗಿ ಪ್ರತಿಯೊಬ್ಬ ಕನ್ನಡಾಭಿಮಾನಿ ಕನ್ನಡ ಧ್ವಜದ ಬಣ್ಣ ಪ್ರತಿಬಿಂಬಿಸುವ ಕೆಂಪು-ಹಳದಿ ಪೇಟಾಗಳನ್ನು ಧರಿಸಿ ಹುರುಪು ಹುಮ್ಮಸ್ಸು ಹಾಗೂ ವಿಜೃಂಭಣೆಯಿಂದ ಭಾಗವಹಿಸಿದ್ದರು.

ತಹಶೀಲ್ದಾರ ಶಿವಾನಂದ ಉಳ್ಳೇಗಡ್ಡಿ, ಸಿಪಿಐ ಮೊತಿಲಾಲ ಪವಾರ,ತಾ.ಪಂ.ಇ.ಓ ಲಕ್ಷ್ಮಣರಾವ ಯಕ್ಕುಂಡಿ, ಕೃಷಿ ಸಹಾಯಕ ನಿರ್ದೇಶಕ ಡಿ.ಬಿ.ಚವ್ಹಾಣ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗುರುರಾಜ ಮನಗೂಳಿ ಸೇರಿದಂತೆ ತಾಲೂಕಿನ ಸರ್ವ ಇಲಾಖೆಯ ಅಧಿಕಾರಿಗಳು ಹಾಗೂ ಪಟ್ಟಣಿಗರು ಉಪಸ್ಥಿತರಿದ್ದು ಕನ್ನಡಾಂಬೆಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಭಿನ್ನ ವಿಭಿನ್ನ ರೀತಿಯ ವೇಷ ಭೂಷಣಗಳಿಂದ  ಜನಮನಸೆಳೆಯುವ ದೃಶ್ಯ ಎದ್ದು ಕಂಡಿತು.  ಶಾಲಾ ವಿದ್ಯಾರ್ಥಿಗಳು ಕೌಶಲ್ಯಪೂರ್ಣವಾಗಿ ವಾದ್ಯಗಳನ್ನು ಬಾರಿಸುತ್ತಾ ಸಾಗುವ ಡೋಲನ್ನು ಶಾಸಕಿ ಅಂಜಲಿ ನಿಂಬಾಳ್ಕರ ನಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಖಾನಾಪುರ ಪಟ್ಟಣದ ಬೀದಿ ಬೀದಿಗಳಲ್ಲಿ ಮೆರವಣಿಗೆ ಸಂಚರಿಸುವುದರ ಮೂಲಕ ಕನ್ನಡದ ಅಭಿಮಾನ ಎತ್ತಿತೋರಿಸದಂತಾಯಿತು. ತಾಯಿ ಭುವನೇಶ್ವರಿಗೆ ಜಯ, ಕರ್ನಾಟಕ ರಾಜ್ಯೋತ್ಸವಕ್ಕೆ ಜಯ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.  ಕನ್ನಡ ಪರ ಸಂಘಟನೆಗಳು,ಕನ್ನಡ ಹೋರಾಟಗಾರರು ಭಾಗವಹಿಸಿದರು.

ಅದರಂತೆ ಐತಿಹಾಸಿಕ ನಂದಗಡ ಗ್ರಾಮದಲ್ಲಿಯೂ ಕರ್ನಾಟಕ ರಾಜ್ಯೋತ್ಸವ ಅತಿ ಉತ್ಸಾಹದಿಂದ ಆಚರಿಸಲಾಯಿತು ಸಂಗೊಳ್ಳಿ ರಾಯಣ್ಣನ ಸಮಾಧಿಗೆ, ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿವಿಧ ಕನ್ನಡ ಪರ ಸಂಘಟನೆಗಳು ಕನ್ನಡದ ದಿನವನ್ನು ಮುಕ್ತ ಮನಸ್ಸಿನಿಂದ ಆಚರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ ಸಾರುವ ವೇಷಭೂಷಣಗಳು, ನೃತ್ಯ ಪ್ರದರ್ಶನ ಸೇರಿದಂತೆ ಇನ್ನಿತರ ಕನ್ನಡ ಕಲೆಗಳನ್ನು ಬಿಂಬಿಸುವ ಕನ್ನಡ ವಾತಾವರಣ ಉತ್ಸವಕ್ಕೆ ಕಳೆ ತಂದಿತು.

ಅದರಂತೆ ಕದಂಬ ಕಾಲದ ಉಪರಾಜಧಾನಿ  ಹಲಸಿ, ಬೀಡಿ, ಗಂದಿಗವಾಡ, ಪಾರಿಶ್ವಾಡ, ಕಕ್ಕೇರಿ, ಲಿಂಗನಮಠ ಸೇರಿದಂತೆ ಖಾನಾಪುರ ತಾಲೂಕಿನಾದ್ಯಂತ ಅಂತ್ಯಂತ ಉತ್ಸಾಹದಿಂದ ರಾಜ್ಯೋತ್ಸವ ಆಚರಿಸುವುದರ ಮೂಲಕ ಗಡಿಭಾಗ ಖಾನಾಪುರ  ಎಂದೆಂದಿಗೂ ಕನ್ನಡಿಗರದ್ದು ಎಂದು ಎತ್ತಿ ಎತ್ತಿ ತೋರಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button