*ಕಾಶಿಯಲ್ಲಿ ಕೆಳದಿ ಅರಸರ ಕಾಲದ ಕನ್ನಡ ಶಾಸನ; ರಕ್ಷಣೆಗೆ ಮುಂದಾದ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ವಾರಾಣಸಿ ಹತ್ತಿರದಲ್ಲಿ ನಿರ್ಲಕ್ಷ್ಯಕ್ಕೊಳಾಗಿದ್ದ ಕೆಳದಿ ಅರಸರ ಕಾಲದ ಕನ್ನಡ ಶಾಸನದ ರಕ್ಷಣೆಗೆ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸೂಕ್ತ ಕ್ರಮ ಕೈಕೊಂಡಿರುವುದು ಸಂಶೋಧನಾ ಸಾಹಿತ್ಯಾಸಕ್ತರಲ್ಲಿ ಹರ್ಷವನ್ನುಂಟು ಮಾಡಿದೆ.
ಕಪಿಲಧಾರಾದಲ್ಲಿ : ಕಾಶಿ ನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕಪಿಲಧಾರಾ ಎಂಬ ಗ್ರಾಮದಲ್ಲಿ ಕೆಳದಿ ಅರಸರು ಪಂಚಕ್ರೋಶಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಟ್ಟಿಸಿರುವ ಸರೋವರದ ಬಳಿ ಕನ್ನಡದ ಈ ಶಾಸನವಿದ್ದು, ಕೆಳದಿ ರಾಜ ಶಿವಪ್ಪನಾಯಕರು ಸರೋವರ ನಿರ್ಮಿಸಿರುವ ಮಾಹಿತಿ ಶಾಸನದಲ್ಲಿ ಕಂಡು ಬಂದಿದೆ.

ರಕ್ಷಣೆಗೆ ಕ್ರಮ :
ಕಪಿಲಧಾರಾ ಗ್ರಾಮದ ಜನತೆ ಈ ಶಾಸನದ ಮಹತ್ವ ಅರಿಯದೇ ಸರೋವರದ ದಡದಲ್ಲಿ ಸಂಪರ್ಕ ಸೇತುವೆಯಂತೆ, ಜೊತೆಗೆ ಬಟ್ಟೆ ತೊಳೆಯಲು ಶಾಸನದ ಈ ಶಿಲೆಯನ್ನು ಬಳಸುತ್ತಿರುವದು ಗಮನಕ್ಕೆ ಬಂದ ತಕ್ಷಣ ಕಾಶಿ ಜಗದ್ಗುರುಗಳು ಅದರ ರಕ್ಷಣೆಗೆ ಕ್ರಮ ಕೈಕೊಂಡಿದ್ದಾರೆ. ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶ್ರೀಪೀಠದ ವ್ಯವಸ್ಥಾಪಕರಾದ ಶಿವಾನಂದ ಹಿರೇಮಠ ಹಾಗೂ ವಕೀಲರಾದ ಉದಯಭಾನು ಸಿಂಹ ಅವರನ್ನು ಸ್ಥಳಕ್ಕೆ ಕಳುಹಿಸಿ ವಸ್ತುಸ್ಥಿತಿಯನ್ನು ಅವಲೋಕಿಸಿದ್ದಾರೆ.
ಈ ಸರೋವರ ಇರುವ ಜಾಗವು ಕಪಿಲಧಾರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದ್ದು, ಅಲ್ಲಿಯ ಅನುಮತಿ ಪಡೆದು ಶಾಸನವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರವಾಸಿಗರಿಗೆ ಪ್ರದರ್ಶನಕ್ಕಿಡಲು ಕ್ರಮಕೈಗೊಳ್ಳಲು ಮೂಲತಃ ಅಪ್ಪಟ ಕನ್ನಡಿಗರೇ ಆಗಿರುವ ಕಾಶಿ ಜಗದ್ಗುರುಗಳು ಯೋಜಿಸಿದ್ದಾರೆ.