*ಕನ್ನಡ ನಾಡು-ನುಡಿಗೆ ಸಂಸದರೆಲ್ಲ ಒಟ್ಟಾಗಿ, ಗಟ್ಟಿಯಾಗಿದ್ದೇವೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದನೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ವಿಷಯದಲ್ಲಿ ಕರ್ನಾಟಕದ ಸಂಸದರೆಲ್ಲ ಒಟ್ಟಾಗಿ, ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಧಾರವಾಡ ಸಂಸದರು ಆಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನವದೆಹಲಿಯಲ್ಲಿ ದೆಹಲಿ ಕರ್ನಾಟಕ ಸಂಘದಿಂದ ಕರ್ನಾಟಕ ಕೇಂದ್ರ ಸಚಿವರು, ಸಂಸದರು ಮತ್ತು ರಾಜ್ಯಸಭಾ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ನಾಡಿನ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಸಂಸದರೂ ಗಟ್ಟಿಯಾಗಿ ನಿಂತಿದ್ದೇವೆ. ಮುಂದೆಯೂ ಪ್ರಾಧಾನ್ಯತೆ ನೀಡಿ ನಿಲ್ಲುತ್ತೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಎಲ್ಲಾ ಸ್ಥಳೀಯ ಭಾಷೆಗಳಿಗೂ ಸಮಾನ ಅವಕಾಶ ಕಲ್ಪಿಸಿದೆ. ಆಯಾ ರಾಜ್ಯಗಳ ಮಾತೃಭಾಷೆಗಳಿಗೆ ಹೆಚ್ಚಿನ ಮಹತ್ವ ನೀಡಿದೆ ಎಂದು ಪ್ರತಿಪಾದಿಸಿದರು.
ಉನ್ನತ ಶಿಕ್ಷಣದಲ್ಲಿ ಸ್ಥಾನಿಕ ಭಾಷೆಗೂ ಪ್ರಾಧಾನ್ಯತೆ
ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಸ್ಥಳೀಯ ಭಾಷೆಯಲ್ಲೂ ಪಠ್ಯಕ್ರಮಕ್ಕೆ ಆದ್ಯತೆ ನೀಡಿದೆ ಎಂದರು.
ಲಕ್ಷಾಂತರ ಜನರ ಅಭಿಪ್ರಾಯ, ತಜ್ಞರ ಸಲಹೆಯಂತೆಯೇ ಪ್ರತಿ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. ಆದರೆ, ಏಕೋ ಕೆಲ ರಾಜ್ಯಗಳು ಒಪ್ಪಿಕೊಳ್ಳುತ್ತಿಲ್ಲ. ಅನಗತ್ಯ ತಕರಾರು ಮಾಡುತ್ತಿವೆ ಎಂದರು.
ಎಲ್ಲಾ ರಾಜ್ಯಗಳು ಹೊಸ ಶಿಕ್ಷಣ ನೀತಿಗೆ ಸಹಮತ ತೋರಲಿ
ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತೀಯ ಭಾಷೆಗಳನ್ನು ಉಳಿಸಿಕೊಳ್ಳಲು ಮತ್ತು ಮಾತೃಭಾಷೆ, ಸ್ಥಾನಿಕ ಭಾಷೆಗಳ ಮಹತ್ವ ಅರಿತು ಎಲ್ಲಾ ರಾಜ್ಯಗಳು ಹೊಸ ಶಿಕ್ಷಣ ನೀತಿಗೆ ಸಹಮತ ತೋರಬೇಕಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಿಸಿದರು.
ಆಂಗ್ಲ ಭಾಷೆಗೆ ನಾಲ್ಕೈದು ಸಾವಿರ ವರ್ಷಗಳ ಇತಿಹಾಸ ಇರಬಹುದು. ಆದರೆ, ಭಾರತೀಯ ಭಾಷೆಗಳಿಗೆ ಪ್ರಾಚೀನ ಇತಿಹಾಸವಿದೆ. ಹಾಗಾಗಿ ಭಾರತೀಯ ಭಾಷೆಗಳನ್ನು ಉಳಿಸಿ, ಬೆಳೆಸುವಲ್ಲಿ ಬದ್ಧತೆ ತೋರಿ ಹೊಸ ಶಿಕ್ಷಣ ನೀತಿಯಲ್ಲಿ ಮೋದಿ ಸರ್ಕಾರ ಮಾತೃಭಾಷೆಗಳಿಗೆ ಮಹತ್ತರ ಅವಕಾಶ ಕಲ್ಪಿಸಿದೆ ಎಂದರು.
ಜಗತ್ತಿನಲ್ಲಿ ಆಂಗ್ಲ ಭಾಷೆ ಪ್ರಮುಖವಾಗಿದ್ದರೂ ಭಾರತದಲ್ಲಿ ಪ್ರಾಂತ್ಯವಾರು ಭಾಷಾ ಸಿರಿವಂತಿಕೆ, ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಸಹಕಾರ ಹಾಗೂ ಮಾತೃ ಭಾಷೆ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ಸುಧಾಕರ್, ಪಿ.ಸಿ. ಮೋಹನ್, ಮಲ್ಲೇಶ ಬಾಬು, ಸಾಗರ್ ಖಂಡ್ರೆ, ನಾರಾಯಣಸಾ ಭಾಂಡಗೆ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿಎಂ ನಾಗರಾಜ್, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ