8 ನಿಗಮ ಮಂಡಳಿಗಳಿಗೆ ನೇಮಕ -ಅಶೋಕ ಪೂಜಾರಿಗೆ ಗಡಿ ಪ್ರಾಧಿಕಾರ, ರಾಜು ಕಾಗೆಗೆ ಕಾಡಾ

ರಾಜ್ಯ ಸಚಿವ ದರ್ಜೆ ಸ್ಥಾನಮಾನ -ಅನರ್ಹರ ಕ್ಷೇತ್ರಗಳ ಪೈಪೋಟಿ ತಪ್ಪಿಸಲು ಪ್ಲ್ಯಾನ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ರಾಜ್ಯದ 8 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ರಾಜ್ಯ ಸಚಿವ ದರ್ಜೆಯ ಸ್ಥಾನಮಾನದೊಂದಿಗೆ ಅವರನ್ನು ನೇಮಕ ಮಾಡಲಾಗಿದೆ.

ಗೋಕಾಕದ ಅಶೋಕ ಪೂಜಾರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕಾಗವಾಡದ ರಾಜು (ಬರಮಗೌಡ )ಕಾಗೆಗೆ ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮ (ಕಾಡಾ) ಅಧ್ಯಕ್ಷಸ್ಥಾನ ನೀಡಲಾಗಿದೆ.

ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮದ ಅಧ್ಯಕ್ಷ ಸ್ಥಾನವನ್ನು ಹಿರೇಕೆರೂರಿನ ಯು.ಬಿ.ಬಣಕಾರ ಅವರಿಗೆ ನೀಡಲಾಗಿದೆ. ಮಸ್ಕಿಯ ಬಸನಗೌಡ ತುರವಿಹಾಳ ಅವರಿಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ಸ್ಥಾನ, ಮುಂಡಗೋಡದ ವಿ.ಎಸ್.ಪಾಟೀಲ ಅವರಿಗೆ ವಾಯವ್ಯ ಕರ್ನಾಟಕ ರಸ್ತೆಸಾರಿಗೆ ಸಂಸ್ಥೆಯ ಅಧ್ಯಕ್ಷಸ್ಥಾನ ನೀಡಲಾಗಿದೆ.

ಹೊಸಪೇಟೆಯ ಎಚ್.ಆರ್.ಗವಿಯಪ್ಪ ಅವರಿಗೆ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಬೆಂಗಳೂರಿನ ನಂದೀಶ ರೆಡ್ಡಿ ಅವರಿಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಅಧ್ಯಕ್ಷಸ್ಥಾನ, ಹೊಸಕೋಟೆಯ ಶರತ್ ಬಚ್ಚೇಗೌಡ ಅವರಿಗೆ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷಸ್ಥಾನ ನೀಡಲಾಗಿದೆ.

ಈ ಮೂಲಕ ಅನರ್ಹ ಶಾಸಕರ ಕ್ಷೇತ್ರಗಳಿಗೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳಾಗಿದ್ದವರನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಬಿಜೆಪಿ ಮಾಡಿದಂತಾಗಿದೆ.