Ghataprabha

ಸರಿಯಾಗಿ ಹುಡುಕಿದರೆ ದೇವರೇ ಸಿಗಬಲ್ಲ

ಸತತ ಪ್ರಯತ್ನದಿಂದ ಮಾತ್ರ ಯಶಸ್ಸು

ಗಿರೀಶ್ ಭಟ್

ನಾವು ಯಾವುದೋ ಒಂದು ಕಷ್ಟವಾದ ಕೆಲಸ ಮಾಡುತ್ತಿರುತ್ತೇವೆ. ಆಗ ಸ್ವಲ್ಪ ಅಡೆ-ತಡೆ ಉಂಟಾದರೂ ನಮಗೆ ಬೇಸರವಾಗುತ್ತದೆ. ಇದು ನನ್ನಿಂದ ಸಾಧ್ಯವಿಲ್ಲವೆಂದು ಎಷ್ಟೋ ಸಲ ನಾವು ಮಾಡಲೇ ಬೇಕಾದ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿ ಅದಕ್ಕೆ ಸೋತು ಶರಣಾಗುತ್ತೇವೆ. ಒಂದು ಯಾವುದಾದರೂ ವಸ್ತುವನ್ನು ಮನೆಯಲ್ಲಿ ಹುಡುಕುತ್ತಿರುತ್ತೇವೆ. ಅದು ಸಿಗಲಿಲ್ಲ. ಸ್ವಲ್ಪ ಸಮಾಧಾನದಿಂದ ಹುಡುಕಿದರೆ ಅದು ಸಿಕ್ಕೇ ಸಿಗುತ್ತದೆ. ಆದರೆ ನಾವು ಬೇಸರದಿಂದ ಹುಡುಕುವುದನ್ನೇ ಬಿಟ್ಟು ಬಿಡುತ್ತೇವೆ. ಅದಕ್ಕೆ ನಾಣ್ನುಡಿ ಇರಬೇಕು. ’ಸರಿಯಾಗಿ ಹುಡುಕಿದರೆ ದೇವರೇ ಸಿಗಬಲ್ಲ’ ಎಂದು.
ಅಷ್ಟೇ ಏಕೆ ಲ್ಯಾಪ್‌ಟಾಪ್/ಡೆಸ್ಕ್ ಟಾಪ್‌ಗಳಲ್ಲಿ ಒಂದು ಅಪ್ಲಿಕೇಷನ್ (ಆಪ್) ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡುವುದಿರುತ್ತದೆ. ಆದರೆ ಮೊದಲನೇ ಸಲ ಅದು ಇನ್‌ಸ್ಟಾಲ್ ಆಗಿಲ್ಲವೆಂದರೆ ನಾವು ಪುನಃ ಪುನಃ ಪ್ರಯತ್ನಿಸುವುದೇ ಇಲ್ಲ. ಹಾಗೆಯೇ ಬಿಟ್ಟುಬಿಡುತ್ತೇವೆ. ಅಂತೆಯೇ ಮುಂಜಾನೆ ಬೇಗ ಎದ್ದು ವಾಕಿಂಗ್ ಹೋಗುವುದು. ದೈಹಿಕ ವ್ಯಾಯಾಮ ನಡೆಸುವುದು. ಇವೆಲ್ಲವನ್ನೂ ನಾವು ಸ್ವಲ್ಪ ದಿನ ಮಾಡಿ ನಂತರ ಬಿಟ್ಟು ಬಿಡುತ್ತೇವೆ. ಮೊದಲಿದ್ದ ಉತ್ಸಾಹ ಬರ ಬರುತ್ತ ಕಡಿಮೆಯಾಗುತ್ತ ಹೋಗುವುದೇ ಇದಕ್ಕೆ ಕಾರಣ.
ಆದರೆ ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಸಹ ಇದೇ ರೀತಿ ತಮ್ಮ ಜೀವನದಲ್ಲಿ ಹಲವಾರು ಸೋಲುಗಳನ್ನು ಕಂಡನು. ಅವನ ಜೀವನದಲ್ಲಿ ಹತ್ತು ಹಲವು ಸೋಲುಗಳು ಎದುರಾಗಿದ್ದವು. ಲಿಂಕನ್ ತನ್ನ ೨೧ನೇ ವಯಸ್ಸಿನಲ್ಲಿ ವ್ಯಾಪಾರ ಶುರುಮಾಡಿದನು. ದೊಡ್ಡ ಪ್ರಮಾಣದ ನಷ್ಟವಾಗಿ ವಿಫಲತೆ ಅನುಭವಿಸಿದನು. ತನ್ನ ೨೨ನೇ ವಯಸ್ಸಿನಲ್ಲಿ ಶಾಸನ ಸಭೆಗೆ ಸ್ಪರ್ಧಿಸಿದನು. ಆದರೆ ಅಲ್ಲೂ ಲಿಂಕನ್‌ಗೆ ಸೋಲು ಕಾಣುವಂತಾಯಿತು.
ಸೋಲುಂಡ ನಂತರ ರಾಜಕೀಯವೇ ಬೇಡ ಎಂದು ತನ್ನ ೨೪ನೇ ವಯಸ್ಸಿನಲ್ಲಿ ಪುನಃ ವ್ಯಾಪಾರಕ್ಕಿಳಿದ. ಆದರೆ ಇಲ್ಲಿಯೂ ಪುನಃ ನಷ್ಟ ಅನುಭವಿಸಿದನು. ವ್ಯಾಪಾರ, ರಾಜಕೀಯದ ಸೋಲಿನಿಂದ ಕಂಗೆಟ್ಟ ಲಿಂಕನ್‌ಗೆ ೨೬ನೇ ವಯಸ್ಸಿನಲ್ಲಿ ಮತ್ತೊಂದು ಆಘಾತ ಕಾದಿತ್ತು. ಆಗ ತನ್ನ ಪ್ರೇಯಸಿಯನ್ನು ಲಿಂಕನ್ ಕಳೆದುಕೊಂಡ. ೨೭ನೇ ವಯಸ್ಸಿನಲ್ಲಿ ಲಿಂಕನ್ ಅನಾರೋಗ್ಯಕ್ಕೆ ತುತ್ತಾದ. ಹೀಗಾಗಿ ಆರೋಗ್ಯವೂ ಈತನ ಕೈಬಿಟ್ಟಿತು. ಆದರೆ ಲಿಂಕನ್ ಸೋಲೊಪ್ಪಿಕೊಳ್ಳಲಿಲ್ಲ. ತನ್ನ ೩೪ನೇ ವಯಸ್ಸಿನಲ್ಲಿ ಮತ್ತೆ ಚುನಾವಣೆಗೆ ನಿಂತ. ಆದರೆ ಆಗಲೂ ಆತ ಸೋಲುವಂತಾಯಿತು. ೪೭ನೇ ವಯಸ್ಸಿನಲ್ಲಿ ಉಪಾಧ್ಯಕ್ಷ ಚುನಾವಣೆಗೆ ನಿಂತಾಗಲೂ ಪರಾಭವಗೊಂಡ. ೪೯ನೇ ವಯಸ್ಸಿನಲ್ಲಿ ಸೆನೆಟ್ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದನು. ನಮ್ಮಂತವರಾದರೆ ಇನ್ನು ಚುನಾವಣೆಯ ಸಹವಾಸವೇ ಬೇಡವೆಂದು ದೂರ ಸರಿದುಬಿಡುತ್ತಿದ್ದೆವು. ಆದರೆ, ಲಿಂಕನ್ ಪ್ರಯತ್ನ ಮುಂದುವರಿಸಿದ. ಅಂತೂ ಲಿಂಕನ್ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ. ಆದರೆ ಇಲ್ಲಿ ಮೊದಲಿನಂತೆ ಸೋಲಾಗಲಿಲ್ಲ. ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದ.
ನಮ್ಮ ಜೀವನದಲ್ಲೂ ಹಾಗೆ. ಕೆಲವೊಮ್ಮೆ ಸದಾ ವೈಫಲ್ಯಗಳನ್ನೇ ಎದುರಿಸಬೇಕಾಬಹುದು. ಅದರರ್ಥ ನಮಗೆ ಯಶಸ್ಸು ಸಿಗುವುದಿಲ್ಲವೆಂದೇನಲ್ಲ. ಸೋಲೇ ಗೆಲುವಿನ ಮೆಟ್ಟಿಲು. ಬಹಳಷ್ಟು ಜನರು ಯಶಸ್ಸಿನ ಅತೀ ಸಮೀಪ ಬಂದು ಸೋಲು ಒಪ್ಪಿಕೊಳ್ಳುತ್ತಾರೆ. ಅಲ್ಲದೆ ತಮ್ಮ ಪ್ರಯತ್ನ ಬಿಟ್ಟುಬಿಡುತ್ತಾರೆ. ಯಶಸ್ಸಿಗೆ ಕೊಂಚ ದೂರದಲ್ಲಿರುವಾಗ ವೈಫಲ್ಯಕ್ಕೆ ಹೆದರಿ ಪಲಾಯನ ಮಾಡುವುದು ಎಷ್ಟು ಸರಿ? ಯಶಸ್ಸಿನ ಹಿಂದಿನ ಕಥೆಯೂ ಸೋಲೇ ಇರಬಹುದು. ಅದೇ ರೀತಿ, ಪ್ರತಿ ಸೋಲಿನಿಂದಲೂ ನಾವು ಒಂದು ತರಹದ ಪಾಠವನ್ನಂತು ಕಲಿತೇ ಬಿಟ್ಟಿರುತ್ತೇವೆ. ಮುಂದೊಂದು ದಿನ ಸೋಲಿನ ಅನುಭವವೇ ಗೆಲುವಿಗೆ ಮುನ್ನುಡಿಯಾಗಬಹುದು. ನಾವು ಸೋಲಿನ ಪ್ರಮಾಣವನ್ನು ಹೆಚ್ಚಿಸಿದಷ್ಟು ಯಶಸ್ಸಿನ ಸಮೀಪಕ್ಕೆ ಬಂದಿರುತ್ತೇವೆ. ಹಾಗಂತ, ಪ್ರಯತ್ನ ಮಾಡುವುದನ್ನು ನಿಲ್ಲಿಸಲಾಗದು.
ಚಿಕ್ಕವನಿರುವಾಗ ಲಿಂಕನ್‌ಗೆ ಓದುವ ಹವ್ಯಾಸವಿತ್ತು. ಪುಸ್ತಕಗಳನ್ನು ಓದಲೆಂದು ಮೈಲುಗಟ್ಟಲೆ ದೂರವಿರುವ ಗ್ರಂಥಾಲಯಕ್ಕೆ ನಡೆದೇ ಹೋಗುತ್ತಿದ್ದನು. ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಆದರೂ ಬಿಡುವಿನ ಸಮಯದಲ್ಲಿ ಪುಸ್ತಕ ಓದುತ್ತಿದ್ದನು. ಲಿಂಕನ್‌ನು ಒಮ್ಮೆ ಅಮೇರಿಕದ ನ್ಯೂ ಅರ್ಲಿಯಾನ್ಸದಲ್ಲಿ ಗುಲಾಮರು ಮಾರಾಟವಾಗುವುದನ್ನು ನೋಡಿದನು. ಗುಲಾಮರನ್ನು ಸರಪಳಿಯಿಂದ ಬಂಧಿಸಿ ದನ-ಕರುಗಳಂತೆ ಮಾರಾಟ ಮಾಡಲಾಗುತ್ತಿತ್ತು. ಬಿಳಿಯರು ಸಾಲಾಗಿ ಬಂದು ತಮಗೆ ಇಷ್ಟವಾಗುವ ಗುಲಾಮರನ್ನು ಖರೀದಿಸುತ್ತಿದ್ದರು. ಆಗ ಲಿಂಕನ್‌ಗೆ ಆ ಗುಲಾಮರ ಸ್ಥಿತಿಯನ್ನು ಕಂಡು ಬಹಳ ದುಃಖವಾಯಿತು.
ಲಿಂಕನ್‌ನು ಯಾವಾಗಲೂ ಚೇಷ್ಟೆ ಮಾಡುತ್ತ ನಗುತ್ತ ಜೀವನ ಸಾಗಿಸುತ್ತಿದ್ದನು. ರಾಜಕಾರಣದ ಮೇಲಿನ ಚರ್ಚೆ ಅವನಿಗೆ ಇಷ್ಟವಾದ ವಿಷಯವಾಗಿತ್ತು. ೧೮೩೪ ರಲ್ಲಿ ಲಿಂಕನ್ ಕಾನೂನು ಅಭ್ಯಾಸ ಪ್ರಾರಂಭಿಸಿದನು. ಎರಡು ವರ್ಷದ ನಂತರ ಕಾನೂನು ಪದವಿ ಪಡೆದನು. ಲಿಂಕನ್ ನಂತರ ವಕೀಲಿ ವೃತ್ತಿ ಪ್ರಾರಂಭಿಸಿದನು. ನಂತರ ಲಿಂಕನ್ ಸಾಕಷ್ಟು ಸಲ ಚುನಾವಣೆಗೆ ನಿಂತಿದ್ದನು, ಅಲ್ಲದೆ ಇಲಿನಾಯ ರಾಜ್ಯದ ವಿಧಾನಸಭೆಯ ಸದಸ್ಯನಾಗಿಯೂ ಕೆಲಸ ಮಾಡಿದನು. ಎರಡು ವರ್ಷ ಅಮೇರಿಕದ ಸೆನೆಟ್‌ನಲ್ಲಿ ಪ್ರತಿನಿಧಿಯಾಗಿ ಕೂಡ ಕೆಲಸ ನಿರ್ವಹಿಸಿದನು.
೧೮೫೮ ರಲ್ಲಿ ಅಮೇರಿಕದ ಸೆನೆಟ್ ಚುನಾವಣೆಯಲ್ಲಿ ನ್ಯೂ ರಿಪಬ್ಲಿಕನ್ ಪಕ್ಷದ ವತಿಯಿಂದ ಸ್ಪರ್ಧಿಸಲು ಲಿಂಕನ್‌ಗೆ ಟಿಕೆಟ್ ದೊರೆಯಿತು. ಲಿಂಕನ್‌ನು ಗುಲಾಮಗಿರಿಯ ವಿರುದ್ಧ ಆವೇಶ ಪೂರ್ವ ಭಾಷಣಗಳನ್ನು ಮಾಡುತ್ತಿದ್ದನು. ಆದರೆ ಲಿಂಕನ್‌ನ ಸಾಕಷ್ಟು ಜನಪ್ರೀಯತೆಯ ಹೊರತಾಗಿಯೂ ಆತನಿಗೆ ಚುನಾವಣೆಯಲ್ಲಿ ಸೋಲಾಯಿತು. ಆದರೆ ೧೮೬೦ ರಲ್ಲಿ ಅಮೇರಿಕದ ರಾಷ್ಟ್ರಾಧ್ಯಕ್ಷ ಪದದ ಚುನಾವಣೆಗೆ ಲಿಂಕನ್ ಸ್ಪರ್ಧಿಸಿದನು. ಇಲ್ಲಿಯೂ ಲಿಂಕನ್ ವಿರುದ್ಧ ೧೮೫೮ ರಲ್ಲಿ ಗೆದ್ದ ಸದಸ್ಯನೇ ಲಿಂಕನ್ ಎದರು ಚುನಾವಣೆಗೆ ಸ್ಪರ್ಧಿಸಿದ್ದನು. ಆದರೆ ಈ ಬಾರಿ ಲಿಂಕನ್ ಚುನಾವಣೆಯಲ್ಲಿ ಗೆದ್ದನು.
ರಾಷ್ಟ್ರಾಧ್ಯಕ್ಷನಾದ ಲಿಂಕನ್ ಒಂದು ದಿನ ನಾಟಕ ನೋಡಲು ಥಿಯೇಟರ್‌ಗೆ ಹೋದಾಗ ದಕ್ಷಿಣ ಅಮೇರಿಕದ ನಿಲುವಿಗೆ ಬೆಂಬಲಿಸುವ ಜಾನ್ ವಿಲ್ಕಿಸ ಬೂಥನೆಂಬ ನಟನು ಗುಂಡು ಹಾರಿಸಿ ಲಿಂಕನ್‌ನ್ನು ಕೊಂದು ಹಾಕಿದನು. ಹೀಗೆ ಲಿಂಕನ್‌ನ ಜೀವನ ದುರಂತದಲ್ಲಿ ಮುಕ್ತಾಯವಾಯಿತು.
ಆದರೆ ನಿರಂತರ ಪ್ರಯತ್ನದಿಂದ ಯಶಸ್ಸು ಕಂಡ ಲಿಂಕನ್‌ನ ಜೀವನ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದೆ. ಸತತ ಸೋಲುಗಳನ್ನು ಕಂಡರೂ ಹತಾಶನಾಗದೆ ಮತ್ತೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡ ಲಿಂಕನ್ ಹೋರಾಟಗಾರರಿಗೆ ಒಂದು ಮಾದರಿ.

ಲಿಂಕನ್‌ನ ಸಂದೇಶಗಳು:

ಸೋಲಿಗೆ ಹೆದರಿ ಪ್ರಯತ್ನ ಬಿಡಬೇಡಿ. ಸೋಲು-ಗೆಲುವು ಮುಖ್ಯವಲ್ಲ. ನಿಮ್ಮ ಭಾಗವಹಿಸುವಿಕೆ, ಸತತ ಪರಿಶ್ರಮ ಮುಖ್ಯವಾದದ್ದು.
* ಕೆಲವೊಂದು ಸೋಲುಗಳು ಗೆಲುವಿಗೆ ತಕ್ಕ ಅಮೂಲ್ಯ ಪಾಠ ಕಲಿಸುತ್ತವೆ. ಭವಿಷ್ಯದಲ್ಲಿ ಯಶಸ್ಸು ಗಳಿಸಲು ಇಂತಹ ಸೋಲುಗಳೆ ನೆರವಾಗುತ್ತವೆ.
* ಓದು, ಉದ್ಯೋಗ, ವ್ಯವಹಾರ, ಜೀವನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ನಿಮ್ಮ ಪರಿಶ್ರಮ, ಗುರಿ ಸದಾ ಮುಂದುವರಿಯಲಿ. ಖಂಡಿತವಾಗಿಯೂ ಒಂದಲ್ಲ ಒಂದು ದಿನ ಯಶಸ್ಸು ಸಿಕ್ಕೇ ಸಿಗುತ್ತದೆ.